ಚಿತ್ರದುರ್ಗ: ಗರ್ಭಾವಸ್ಥೆಯಲ್ಲಿ ಮಹಿಳೆಯ ಆರೈಕೆ ಸರಿಯಾಗಿ ಮಾಡಿದರೆ ತಾಯಿ ಮರಣ ಶಿಶು ಮರಣ ತಡೆಗಟ್ಟಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಎಸ್ .ಸಿ ಕಾಲೋನಿ ಅಂಗನವಾಡಿ ಬಳಿ ಗರ್ಭಿಣಿ ಬಾಣಂತಿಯರ ಮನೆ ಮನೆ ಭೇಟಿ ಮಾಡಿ ದೇವಸ್ಥಾನದ ಆವರಣದಲ್ಲಿ ಗುಂಪು ಸಭೆ ನಡೆಸಿ ಅವರು ಮಾತನಾಡಿದರು.
ಗರ್ಭಿಣಿಯರ ಆರೈಕೆ, ಬಾಣಂತಿಯರ ಆರೈಕೆ, ಮಕ್ಕಳ ಆರೈಕೆ ಸರಿಯಾಗಿ ಮಾಡಲು ಕುಟುಂಬದ ಸರ್ವ ಸದಸ್ಯರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಗರ್ಭಿಣಿಯರು ಪ್ರತಿ ತಿಂಗಳು 9ನೇ ತಾರೀಖಿನಂದು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಲ್ಲಿ ಪಾಲ್ಗೊಂಡು, ಉಚಿತ ಪ್ರಯೋಗಾಲಯ ಪರೀಕ್ಷೆಗಳು, ರಕ್ತದೊತ್ತಡ, ಸಿಹಿ ಮೂತ್ರ ಇತರೆ ಪರೀಕ್ಷೆಗಳನ್ನು ಮಾಡಿಸಿ, ವೈದ್ಯರು ನೀಡುವ ಸಲಹೆ ಸೂಚನೆ ಪಾಲಿಸಿ ಎಂದರು.
ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡಿ. ಮನೆ ಹೆರಿಗೆ ಮಾಡಿಸದೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಿ. ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಕಾಲಕಾಲಕ್ಕೆ ಮಾರಣಾಂತಿಕ ರೋಗಗಳ ವಿರುದ್ಧ ಲಸಿಕೆಯನ್ನು ಪಡೆದುಕೊಳ್ಳಿ. ಕಬ್ಬಿನಾಂಶದ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ತಪ್ಪದೇ ಸೇವಿಸಿ ರಕ್ತಹೀನತೆಗೆ ಅವಕಾಶ ನೀಡದೆ, ಸೊಪ್ಪು ತರಕಾರಿ ನಾರು ಬೇರು ಖನಿಜ ಅಂಶಯುಕ್ತ ಅನ್ನಾಂಗಯುಕ್ತ, ಹಣ್ಣು ಹಾಲು ಮೊಟ್ಟೆ ಮೀನು ಬೇಳೆ ಕಾಳುಗಳನ್ನ ಸೇವಿಸಿ. ಗರ್ಭಾವಸ್ಥೆಯಲ್ಲಿ ಮಹಿಳೆಯರ ಆರೈಕೆಗೆ ಕುಟುಂಬದ ಸದಸ್ಯರೆಲ್ಲರೂ ಒಗ್ಗೂಡಿ ಆರೈಕೆ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಕಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ರೂಪ, ಸಮುದಾಯ ಆರೋಗ್ಯ ಅಧಿಕಾರಿ ಪ್ರತಿಭಾ, ಆಶಾ ಕಾರ್ಯಕರ್ತೆ ಮಂಜುಳಾ, ಗರ್ಭಿಣಿ, ಬಾಣಂತಿಯರು, ತಾಯಂದಿರು ಇದ್ದರು.