ತುಮಕೂರು: ಕಾಡುಗೊಲ್ಲ ಸಮುದಾಯದ ಮೈಲಿಗೆ ಸಂಪ್ರದಾಯಕ್ಕೆ ಮಗು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಸಾವಾದರೂ ಬಾಣಂತಿಯನ್ನು ಗ್ರಾಮಸ್ಥರು ಊರು ಒಳಗೆ ಬಿಟ್ಟುಕೊಳ್ಳಲು ನಿರಾಕರಿಸುತ್ತಿದ್ದಾರೆ.
ಶೀತ ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ಮೂರು ದಿನಗಳ ಹಿಂದೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಗು ಮರುದಿನವೇ ಮೃತಪಟ್ಟಿದೆ.
ಮಗು ಮೃತಪಟ್ಟ ನಂತರವೂ ತಾಯಿಯನ್ನು ಹಟ್ಟಿಯ ಒಳಗಡೆ ಬಿಟ್ಟುಕೊಂಡಿಲ್ಲ. ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯನ್ನು ಲೆಕ್ಕಿಸದೆ ಊರಾಚೆಯ ಗುಡಿಸಲಿನಲ್ಲಿಯೇ ಒಂಟಿಯಾಗಿ ಇರಿಸಲಾಗಿತ್ತು.
ಕಾಡು ಗೊಲ್ಲ ಸಮುದಾಯದ ಈ ಮಹಿಳೆ ಕಳೆದ ತಿಂಗಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವಧಿಗೂ ಮುನ್ನ ಜನಿಸಿದ್ದರಿಂದ ಒಂದು ಮಗು ಆಗಲೇ ಮೃತಪಟ್ಟಿತ್ತು. ನಂತರ ಬಾಣಂತಿ ಮತ್ತು ಮತ್ತೊಂದು ಮಗುವನ್ನು ಗ್ರಾಮದ ಹೊರ ವಲಯದ ಗುಡಿಸಲಿನಲ್ಲಿ ಇಡಲಾಗಿತ್ತು.
ನಂತರ ಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ ತುಮಕೂರು ತಹಶೀಲ್ದಾರ್ ಸಿದ್ದೇಶ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮನಒಲಿಸಲು ಯತ್ನಿಸಿದರು. ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ, ಆರ್ ಸಿಎಚ್ ಮೋಹನ್, ಟಿಎಚ್‌ಒ ಲಕ್ಷ್ಮೀಕಾಂತ್ ಸೇರಿದಂತೆ ಸ್ಥಳಕ್ಕೆ ತೆರಳಿ ,ಬಾಣಂತಿಯನ್ನು ಊರ ಒಳಗೆ ಬಿಟ್ಟುಕೊಳ್ಳುವಂತೆ ಜೊತೆಗೆ ಇಂತಹ ಮೂಢನಂಬಿಕೆಗಳನ್ನು ಬಿಡುವಂತೆ ಗ್ರಾಮದ ಹಿರಿಯರೊಂದಿಗೆ ಚರ್ಚೆ ನಡೆಸಿದರು.