ತುಮಕೂರು: ಗೋಕಟ್ಟೆಗೆ ಬಿದ್ದು ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಗಂಗಾ ಮಠಕ್ಕೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಭೇಟಿ ನೀಡಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದ ನಂತರ ಸ್ವಾಮೀಜಿಯಿಂದ ಘಟನೆ ಮಾಹಿತಿ ಪಡೆದಿದ್ದಾರೆ.
ಬಳಿಕ ಗೃಹ ಸಚಿವ ಡಾ. ಜಿ ಪರಮೇಶ್ವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ಡಾ. ಜಿ.ಪರಮೇಶ್ವರ್, ನಿನ್ನೆ ಮಧ್ಯಾಹ್ನ ಮೃತ ತಾಯಿ ಹಾಗೂ ಮಗ ಇಲ್ಲಿ ಊಟ ಮಾಡಿಲು ಬಂದಿದ್ದಾರೆ. ಈ ವೇಳೆ ರಂಜಿತ ಕಾಲು ಕೆಸರಾಗಿದೆ ಅಂತ ಕಾಲು ತೊಳೆಯಲು ಹೋಗಿ ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾನೆ. ಆತನನ್ನು ರಕ್ಷಸಿಲು ಆತನ ತಾಯಿ ಹೋಗಿದ್ದಾರೆ. ಆಮೇಲೆ ಆತನ ಜೊತೆಗೆ ಇದ್ದ ಇನ್ನೊಬ್ಬ ಹುಡುಗ ಕೂಡ ಬಿದ್ದಿದ್ದಾರೆ. ಇದೇ ವೇಳೆ ಸ್ಥಳದಲ್ಲಿ ಇದ್ದ ಮಹದೇವಪ್ಪ ಕೂಡ ಬಿದ್ದಿದ್ದಾರೆ. ರಂಜಿತನನ್ನು ರಕ್ಷಣೆ ಮಾಡಿ, ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎಂದರು.
ಹೊಂಡದಲ್ಲಿ 10- 15 ಅಡಿ ನೀರಿದೆ. ಘಟನೆಗೆ ವಿಷಾಧ ವ್ಯಕ್ತಪಡಿಸುತ್ತೇನೆ. ಶ್ರೀ ಮಠದಲ್ಲಿ ಇಂತಹ ಘಟನೆ ವಿರಳ. ಮೃತರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡುತ್ತೇವೆ. ಈ ಕುರಿತು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.
ಕಟ್ಟೆ ಸುತ್ತಲೂ ಮುಳ್ಳು ತಂತಿ ಹಾಕಲು ಮಠ ಸಿದ್ಧತೆ ಮಾಡಿಕೊಂಡಿತ್ತು ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಉಪೇಂದ್ರ ವಿರುದ್ಧ ಕೇಸ್ ದಾಖಲು ವಿಚಾರ ಕುರಿತು ಪ್ರತಿಕ್ರಿಯಿಸಿ, ಈ ಬಗ್ಗೆ ಮಾಹಿತಿ ಇಲ್ಲ, ಡಿಟೈಲ್ ಪಡೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡ ಮುರುಳಿಧರ್ ಹಾಲಪ್ಪ, ಜಿಲ್ಲಾಧಿಕಾರಿ ಶ್ರೀನಿವಾಸ್, ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಹಾಗೂ ಸಿಇಒ ಪ್ರಭು ಉಪಸ್ಥಿತರಿದ್ದರು.