ಮಂಡ್ಯ: ಗೋವುಗಳ ಮೂಳೆ, ಮಾಂಸ ಅಕ್ರಮ ಶೇಖರಣೆ ಪ್ರಕರಣಕ್ಕೆ ಸಂಬಂದಿಸಿದಂತೆ ನಿನ್ನೆ ಸಂಜೆ ಇದ್ದ ಮೂಳೆಗಳ ರಾಶಿ ಬೆಳಿಗ್ಗೆ ಆಗುವುದರೊಳಗೆ ನಾಪತ್ತೆಯಾಗಿದ್ದು, ಅಕ್ರಮವಾಗಿ ರಾತ್ರೋರಾತ್ರಿ ಕದ್ದು ಸಾಗಾಟ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಅಕ್ರಮ ಗೋ ಮಾಂಸ, ಮೂಳೆ ಸಂಗ್ರಹ, ಸಾಗಾಟದಲ್ಲಿ ಪೊಲೀಸರು, ಸ್ಥಳೀಯ ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ಮೂಡಿದೆ.
ನಿನ್ನೆಯಷ್ಟೇ ಭಜರಂಗ ದಳ ಕಾರ್ಯಕರ್ತರು ಮಂಡ್ಯ ತಾಲೂಕಿನ ತೂಬಿನಕೆರೆ ಹೊರವಲಯದ ಗೋಡೌನ್ ನಲ್ಲಿ ಮೂಳೆ, ಮಾಂಸ ಸಂಗ್ರಹಿಸಿರುವುದನ್ನು ಪತ್ತೆ ಹಚ್ಚಿದ್ದು, ಈ ವೇಳೆ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದರು.
ಆದರೆ ಮೂಳೆ, ಮಾಂಸ ಸಂಗ್ರಹಿಸಿದ್ದ ಗೋಡೌನ್ ಸೀಜ್ ಮಾಡಿ, ಕೇಸ್ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದರು.
ಪೊಲೀಸರ ನಿರ್ಲಕ್ಷ್ಯದಿಂದ ರಾತ್ರೋ ರಾತ್ರಿ ಕಳ್ಳ ದಾರಿಯಲ್ಲಿ ಮಾಂಸ, ಮೂಳೆಗಳನ್ನು ಅಕ್ರಮ ಸಾಗಾಟ ಮಾಡಲಾಗಿದ್ದು,ಪೊಲೀಸರ ಸಮ್ಮುಖದಲ್ಲೇ ಅಕ್ರಮವಾಗಿ ಸಾಗಾಣಿಕೆ ಮಾಡಿರುವ ಆರೋಪ ಕೇಳಿಬಂದಿದೆ.
ಗುಜರಿಗೆಂದು ಬಾಡಿಗೆಗೆ ಪಡೆದು ಅಕ್ರಮವಾಗಿ ಗೋವುಗಳ ಮೂಳೆ-ಮಾಂಸ ಸಂಗ್ರಹ ಮಾಡಲಾಗಿತ್ತು.
ಡಿಸೆಂಬರ್ 13ರಂದೇ ಸ್ಥಳೀಯರು ಗ್ರಾಪಂಗೆ ದೂರು ನೀಡಿದ್ದು, ದೂರು ಆಧರಿಸಿ, ಜಾಗದ ಮಾಲೀಕರಿಗೆ ನೋಟಿಸ್ ಕೊಟ್ಟು ಗ್ರಾಪಂ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ.
ಸ್ಥಳೀಯ ಗ್ರಾಪಂನಿಂದ ಅನುಮತಿಯನ್ನು ಪಡೆಯದೆ, ಕಾನೂನುಬಾಹಿರವಾಗಿ ಗೋಡೌನ್ ನಿರ್ಮಿಸಿ, ಅಕ್ರಮ ಗೋವುಗಳ ಮೂಳೆ-ಮಾಂಸ ಸಂಗ್ರಹಿಸಿದ್ದರು ಕ್ರಮ ವಹಿಸದೆ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರು ಎಂದು ಆರೋಪಿಸಲಾಗಿದೆ.