ಹೊಸೂರು : ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ದ ರಾಜ್ಯ ಪಾಲರಿಗೆ ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಿಐಡಿ ಪೊಲೀಸರು ಮೈಸೂರು ಜಿಲ್ಲೆಯ ಇಬ್ಬರು ಕೃಷಿ ಅಧಿಕಾರಿಗಳನ್ನು ವಶಕ್ಕೆ ಪಡೆದು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ 7 ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ರಾಜ್ಯಪಾಲರಿಗೆ ಕೃಷಿ ಸಚಿವರ ವಿರುದ್ದ ಪತ್ರ ಬರೆದಿದ್ದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದ ಸತ್ಯಾ ಸತ್ಯತೆಯನ್ನು ಅರಿಯಲು ಸಿಐಡಿ ಗೆ ವರ್ಗಾಯಿಸಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ಸಿಐಡಿ ಪೊಲೀಸರಿಗೆ ಮೊದಲಿಗೆ ಈ ಪತ್ರವನ್ನು ಮೈಸೂರಿನ ಸರಸ್ವತಿಪುರಂ ನ ಅಂಚೆ ಕಚೇರಿಯ ಮೂಲಕ ರಾಜ್ಯಪಾಲರಿಗೆ ಪತ್ರ ಕಳಿಸಿರುವುದು ಪತ್ತೆಯಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರದ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಮತ್ತು ಕೃಷಿ ಅಧಿಕಾರಿ ಸುದರ್ಶನ್ ಅವರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದು ಕೊಂಡು ಹೋಗಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆ.ಆರ್.ನಗರದ ಕೃಷಿ ಇಲಾಖೆಗೆ ದಾಳಿ ನಡೆಸಿ ಈ ಇಬ್ಬರನ್ನು ತಮ್ಮ ವಶಕ್ಕೆ ಪಡೆದ ಸಿಐಡಿ ಪೊಲೀಸರು ಕಚೇರಿಯಲ್ಲಿದ್ದ ಕೆಲವು ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.
ಪ್ರಕರಣದಲ್ಲಿ ಕೃಷಿ ಅಧಿಕಾರಿಗಳಿಗೆ ನಕಲಿ ಪತ್ರ ಬರೆಯಲು ರಾಜಕೀಯ ಒತ್ತಡಗಳು ಇತ್ತೆ ಎಂದು ಸಿಐಡಿ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು ಇನ್ನು ಹಲವರನ್ನ ಈ ಪ್ರಕರಣಕ್ಕೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಸ್.ಚಂದ್ರಶೇಖರ್ ಈ ಇಬ್ಬರು ಅಧಿಕಾರಿಗಳನ್ನು ಸಿಐಡಿ ಅವರು ವಶಕ್ಕೆ ಪಡೆದು ಮತ್ತು ಅಲ್ಲಿನ ಕಚೇರಿಯಲ್ಲಿ ಪರೀಶೀಲನೆ ನಡೆಸಿರುವುದನ್ನ ಖಚಿತ ಪಡಿಸಿದ್ದಾರೆ.ಈ ಬಗ್ಗೆ ಪತ್ರಿಕ್ರಿಯಿಸಿರುವ ಸಚಿವ ಚಲುವರಾಯ ಸ್ವಾಮಿ ಕೃಷಿ ಅಧಿಕಾರಿಗಳು ನನ್ನ ವಿರುದ್ದ ಯಾಕೆ ನಕಲಿ ಪತ್ರವನ್ನು ರಾಜ್ಯಪಾಲರಿಗೆ ಬರೆದಿದ್ದಾರೊ ತಿಳಿಯದು, ಸತ್ಯ ತಿಳಿಯಬೇಕಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಪತ್ರಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೃಷಿ ಸಚಿವರ ವಿರುದ್ದ ಆರೋಪ ಸುಳ್ಳು ಎನ್ನುವುದಾದರೇ ಈ ಅಧಿಕಾರಿಗಳನ್ನು ಯಾಕೆ ಸಿಐಡಿ ಪೊಲೀಸರು ವಶಕ್ಕೆ ಪಡೆದರು ಎಂದು ಪ್ರಶ್ನಿಸಿದ್ದಾರೆ.