ಪಿರಿಯಾಪಟ್ಟಣ: ಪಟಾಕಿ ಮಾರಾಟಕ್ಕೆ ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಹಶೀಲ್ದಾರ್ ಕುಂ ಇ ಅಹಮದ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ತಾಲೂಕಿನ ವಿವಿದೆಡೆಯ ಪಟಾಕಿ ಮಾರಾಟ ಅಂಗಡಿಗಳ ಮಾಲೀಕರ ಸಭೆ ನಡೆಸಿ ಅವರು ಮಾತನಾಡಿದರು, ಸರ್ಕಾರ ಪಟಾಕಿ ಅಂಗಡಿಗಳಲ್ಲಿ ಕೇವಲ ಹಸಿರು ಪಟಾಕಿ ಹಾಗೂ ಪರಿಸರಕ್ಕೆ ಹಾನಿ ಉಂಟು ಮಾಡದಂತಹ ಮತ್ತು ಶಬ್ದ ಮಾಲಿನ್ಯವಾಗದಂತಹ ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದ್ದು ಪಟಾಕಿ ಅಂಗಡಿಗಳ ಮಾಲೀಕರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ನಿಯಮ ಉಲ್ಲಂಘಿಸುವರು ಹಾಗೂ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವವರನ್ನು ಪತ್ತೆಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಪಿರಿಯಾಪಟ್ಟಣ ಆರಕ್ಷಕ ಠಾಣೆ ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್ ಅವರು ಮಾತನಾಡಿ ಪಟಾಕಿ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಸಂಬಂಧಿಸಿದ ಇಲಾಖೆಗಳ ಮುಖಾಂತರ ಅನುಮತಿ ಪಡೆದಿರಬೇಕು ಹಾಗೂ ನಿರ್ಜನ ಪ್ರದೇಶಗಳಲ್ಲಿ ಅಗತ್ಯಕ್ಕನುಗುಣವಾಗಿ ಪಟಾಕಿ ದಾಸ್ತಾನು ಮಾಡಿಕೊಂಡು ತುರ್ತು ಅವಘಡ ಸಂದರ್ಭ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸೂಕ್ತ ಕ್ರಮ ಅನುಸರಿಸುವಂತೆ ತಿಳಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.
ಈ ಸಂದರ್ಭ ಶಿರಸ್ತೆದಾರ್ ಶಕೀಲಾ ಬಾನು, ಬೆಟ್ಟದಪುರ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ, ಅಗ್ನಿಶಾಮಕ ಠಾಣೆ ಅಧಿಕಾರಿ, ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಶೇಖರ್ ಮತ್ತು ತಾಲೂಕಿನ ವಿವಿದೆಡೆಯ ಪಟಾಕಿ ಮಾರಾಟ ಅಂಗಡಿಗಳ ಮಾಲೀಕರು ಇದ್ದರು.