ಮಂಗಳೂರು: ಮಂಗಳೂರಿನ ಶಕ್ತಿನಗರದ ಪದುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ಕ್ಯಾಷಿಯರ್ ಪ್ರೀತೇಶ್ ಗ್ರಾಹಕರ ಚಿನ್ನವನ್ನು ಎಗರಿಸಿ ದೊಡ್ಡ ಮಟ್ಟದ ಹಣಕಾಸು ಹಗರಣ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿನಲ್ಲಿ ಸುಮಾರು 2,000ಕ್ಕೂ ಹೆಚ್ಚು ಖಾತೆದಾರರಿದ್ದು, ಈತನ ಕೃತ್ಯದಿಂದ 26 ಮಂದಿ ಗ್ರಾಹಕರಿಗೆ ನಷ್ಟವಾಗಿದೆ.
ಪ್ರೀತೇಶ್, ಬ್ಯಾಂಕಿನಲ್ಲಿ ಲೋನ್ ದಾಖಲಾತಿಗಳನ್ನು ನಕಲಿ ದಾಖಲೆಗಳ ಮೂಲಕ ಕ್ಲಿಯರ್ ಮಾಡಿಕೊಂಡು, ಸುಮಾರು 5.80 ಕೋಟಿ ಮೌಲ್ಯದ 6.5 ಕೆ.ಜಿ ಚಿನ್ನವನ್ನು ದೋಚಿದ್ದ. ನಂತರ ದುಬೈಗೆ ಪರಾರಿಯಾಗಿದ್ದ ಈತನ ವಿರುದ್ಧ ಬ್ಯಾಂಕ್ ಆಡಳಿತ ಮಂಡಳಿ ದೂರು ನೀಡಿದ ಬೆನ್ನಲ್ಲೇ, ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ದೋಚಿದ ಚಿನ್ನದೊಳಗಿನ 2.3 ಕೆ.ಜಿ ಬಂಗಾರವನ್ನು ಮತ್ತೊಂದು ಸಹಕಾರ ಬ್ಯಾಂಕಿನಲ್ಲಿ ಅಡವಿಟ್ಟು ₹2.5 ಕೋಟಿ ಸಾಲ ಪಡೆದಿದ್ದಾನೆ.
ಈ ಕೃತ್ಯಕ್ಕೆ ಶೇಖ್ ಮಹಮ್ಮದ್ ಎಂಬಾತ ಸಹಾಯ ಮಾಡಿದ್ದು, ಪೊಲೀಸರು ಈತನನ್ನೂ ವಶಕ್ಕೆ ಪಡೆದು ನಾಲ್ಕು ಕಿಲೋ ನಕಲಿ ಚಿನ್ನ ಜಪ್ತಿ ಮಾಡಿದ್ದಾರೆ. ಪ್ರೀತೇಶ್ ನಕಲಿ ಚಿನ್ನಾಭರಣಗಳನ್ನು ಸಿದ್ಧಪಡಿಸಿ ಗ್ರಾಹಕರಿಗೆ ಮರು ನೀಡಲು ಯೋಜನೆ ಹಾಕಿಕೊಂಡಿದ್ದ.