ಬೆಂಗಳೂರು : ತಂತ್ರಜ್ಞಾನ ಬಳಕೆಯಲ್ಲಿ ಹೊಸ ಹೆಜ್ಜೆ ಇಟ್ಟಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊದಲ ಬಾರಿಗೆ ಸಂಪೂರ್ಣ ಕ್ಯಾಶ್ಲೆಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಜೈಲಿನ ಕ್ಯಾಂಟೀನ್ಗಳಲ್ಲಿ ನಗದು ಹಣದ ವಹಿವಾಟು ಇರುವುದಿಲ್ಲ. ಕೈದಿಗಳು ತಮ್ಮ ಬೆರಳಚ್ಚು ಅಥವಾ ಮುಖ ಗುರುತಿಸುವಿಕೆ (Facial Recognition) ಮೂಲಕವೇ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ.
ಜೈಲಿನೊಳಗಿನ ಅಕ್ರಮ ಹಣದ ವಹಿವಾಟು ತಡೆಯುವುದು ಹಾಗೂ ಪ್ರತಿಯೊಂದು ಹಣಕಾಸು ವ್ಯವಹಾರಕ್ಕೂ ಪಾರದರ್ಶಕ ಲೆಕ್ಕ ನಿರ್ವಹಿಸುವ ಉದ್ದೇಶದಿಂದ ಈ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಂಡಿದ್ದು, ಕೈದಿಗಳ ಕುಟುಂಬಸ್ಥರು ಇನ್ನು ಮುಂದೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬಹುದು. ಜೈಲಿನೊಳಗೆ ಕೆಲಸ ಮಾಡಿ ಕೈದಿಗಳು ಗಳಿಸುವ ಕೂಲಿ ಹಣವೂ ಇದೇ ಖಾತೆಗೆ ಜಮೆಯಾಗಲಿದೆ.
ಕ್ಯಾಂಟೀನ್ನಲ್ಲಿ ಹಣ್ಣು, ಡ್ರೈ ಫ್ರೂಟ್ಸ್, ಬ್ರೆಡ್, ಬಿಸ್ಕೆಟ್, ಸೋಪು ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಖರೀದಿಸುವಾಗ ಕೈದಿಗಳು ತಮ್ಮ ಬಯೋಮೆಟ್ರಿಕ್ ಗುರುತನ್ನು ದೃಢೀಕರಿಸಬೇಕು. ಬಳಿಕ ಖರೀದಿಸಿದ ಮೊತ್ತವು ಅವರ ಖಾತೆಯಿಂದ ಸ್ವಯಂಚಾಲಿತವಾಗಿ ಕಾರಾಗೃಹ ಇಲಾಖೆಯ ಖಾತೆಗೆ ವರ್ಗಾವಣೆಯಾಗಲಿದೆ.
ಕೈದಿಗಳ ದುರ್ಬಳಕೆ ಮತ್ತು ದುಂದುವೆಚ್ಚ ತಡೆಯಲು ಕ್ಯಾಂಟೀನ್ ಖರೀದಿಗೆ ತಿಂಗಳಿಗೆ ಗರಿಷ್ಠ ₹5,000 ಮಿತಿ ನಿಗದಿಪಡಿಸಲಾಗಿದೆ. ಭದ್ರತಾ ಕಾರಣಗಳಿಂದ ಕೈದಿಗಳ ಬ್ಯಾಂಕ್ ಪಾಸ್ಬುಕ್ಗಳು ಜೈಲು ಅಧಿಕಾರಿಗಳ ವಶದಲ್ಲಿರಲಿವೆ. ಈ ವ್ಯವಸ್ಥೆಯಿಂದ ಜೈಲಿನೊಳಗಿನ ಅಕ್ರಮ ನಗದು ವಹಿವಾಟಿಗೆ ಕಡಿವಾಣ ಬೀಳಲಿದ್ದು, ಪ್ರತಿಯೊಂದು ವ್ಯವಹಾರಕ್ಕೂ ಸ್ಪಷ್ಟ ದಾಖಲೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜಾರಿಗೆ ತರಲಾಗಿದ್ದು, ಯಶಸ್ಸಿನ ಆಧಾರದ ಮೇಲೆ ರಾಜ್ಯದ ಇತರೆ ಪ್ರಮುಖ ಜೈಲುಗಳಿಗೂ ಹಂತ ಹಂತವಾಗಿ ವಿಸ್ತರಿಸಲು ಕಾರಾಗೃಹ ಇಲಾಖೆ ಯೋಜಿಸಿದೆ.



