Friday, April 11, 2025
Google search engine

Homeರಾಜ್ಯಜಾತಿ ನಿಂದನೆ ಆರೋಪ: ನಟ ಉಪೇಂದ್ರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

ಜಾತಿ ನಿಂದನೆ ಆರೋಪ: ನಟ ಉಪೇಂದ್ರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ

ಬೆಂಗಳೂರು: ಜಾತಿ ನಿಂದನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ಉಪೇಂದ್ರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಉಪೇಂದ್ರ ಅಲಿಯಾಸ್ ಬಿ.ಎಂ. ಉಪೇಂದ್ರ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು‌.

ವಿಚಾರಣೆ ವೇಳೆ ಉಪೇಂದ್ರ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು, ಅರ್ಜಿದಾರರು ಗಾದೆ ಮಾತನ್ನು ಮಾತ್ರವೇ ಉಲ್ಲೇಖಿಸಿದ್ದಾರೆ. ಮಾತಿನ ಹಿಂದೆ ಬೇರೆ ಯಾವುದೇ ದುರುದ್ದೇಶ ಇರಲಿಲ್ಲ. ಆದ್ದರಿಂದ, ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬರಿ ಇದೊಂದೇ ಗಾದೆ ಮಾತು ಪ್ರಯೋಗಿಸಿದರೋ ಹೇಗೆ? ಎಂಬುದನ್ನು ಖಚಿತಪಡಿಸಿಕೊಂಡು ಪ್ರಕರಣದ ವಿವರ ಆಲಿಸಿತು. ನಂತರ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ ಎಫ್ ಐ ಆರ್ ಗೆ ಮಧ್ಯಂತರ ತಡೆ ನೀಡಿ ಆದೇಶಿಸಿತು.

ಇದೇ ವೇಳೆ ದೂರುದಾರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆಪ್ಟೆಂಬರ್ ಎರಡನೇ ವಾರಕ್ಕೆ ಮುಂದೂಡಿತು. ಅರ್ಜಿದಾರರ ಪರ ವಿವೇಕ್ ಹೊಳ್ಳ ವಕಾಲತ್ತು ವಹಿಸಿದ್ದರು. ವಾದ ಮಂಡನೆ ವೇಳೆ ವಕೀಲ ಎಸ್. ಚಂದ್ರಶೇಖರ್ ಮತ್ತು ಎಂ.ಎಸ್. ರಾಜೇಂದ್ರ ಹಿರಿಯ ವಕೀಲರಿಗೆ ಸಹಕರಿಸಿದರು.

ಏನಿದು ಪ್ರಕರಣ?

ನಟ ಉಪೇಂದ್ರ ಅವರು, ಸಾಮಾಜಿಕ ಜಾಲತಾಣದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ “ಊರೆಂದರೆ ಹೊಲಗೇರಿ ಇರುತ್ತೆ” ಎಂಬ ಶಬ್ದಗಳನ್ನು ಪ್ರಯೋಗಿಸುವ ಮೂಲಕ ದಲಿತ ಸಮಾಜದಲ್ಲಿನ ಜಾತಿ ಭಾವನೆಗಳಿಗೆ ಘಾಸಿ ಉಂಟು ಮಾಡಿದ್ದಾರೆ. ಒಬ್ಬ ನಟನಾಗಿ ರಾಜ್ಯದಾದ್ಯಂತ ಹೆಸರು ಮಾಡಿರುವ ಉಪೇಂದ್ರ ಎಲ್ಲರಿಗೂ ಮಾದರಿಯಾಗಿ ನಡೆದುಕೊಳ್ಳಬೇಕಾಗಿತ್ತು. ಈ ನಟನನ್ನು ಅನುಕರಣೆ ಮಾಡುವವರೂ ಇದನ್ನೇ ಮುಂದುವರೆಸಿದಲ್ಲಿ ಸಾರ್ವಜನಿಕ ಸ್ವಾಸ್ಥ್ಯ ಹಾಳಾಗುವ ಸಾಧ್ಯತೆ ಇರುತ್ತದೆ. ಈ ಮಾತಿನಿಂದ ದಲಿತರ ಭಾವನೆಗೆ ಘಾಸಿ ಉಂಟಾಗಿರುವ ಕಾರಣ ಎಸ್ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರಿನ ಸಮತಾ ಸೈನಿಕ ದಳದ ಗೋಪಾಲ ಗಿರಿಯಪ್ಪ ಮತ್ತು ಬನಶಂಕರಿ ನಾಗು ಪತ್ರಮುಖೇನ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದರು.

ಇದರನ್ವಯ, ಬೆಂಗಳೂರು ದಕ್ಷಿಣ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಗ್ರೇಡ್-1) ಕೆ.ಎನ್. ಮಧುಸೂಧನ್ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಇದೇ 13ರಂದು ದೂರು ದಾಖಲಿಸಿದ್ದರು.

ದೂರಿಗೆ ಸಂಬಂಧಿಸಿದಂತೆ ಪೊಲೀಸರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ-1989ರ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದರು. ಈ ಎಫ್ ಐ ಆರ್ ರದ್ದುಗೊಳಿಸುವಂತೆ ಕೋರಿ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ರಿಟ್ ಅರ್ಜಿಯಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ (ಗ್ರೇಡ್-1) ಮತ್ತು ವಿಶ್ವೇಶ್ವರಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿದೆ.

RELATED ARTICLES
- Advertisment -
Google search engine

Most Popular