ಶಿವಗಂಗೈ : ದಲಿತ ವಿದ್ಯಾರ್ಥಿಯ ಮೇಲೆ ಪ್ರಬಲ ಜಾತಿಯ ಹಿಂದುಗಳು ಕ್ರೂರವಾಗಿ ದಾಳಿ ನಡೆಸಿದ್ದು, ಆತ ಕೈಗಳನ್ನು ಕತ್ತರಿಸಿ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಮೇಲಾಪಿದವೂರ್ ಬಳಿ ನಡೆದಿದೆ.
ಸರ್ಕಾರಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ದಲಿತ ವಿದ್ಯಾರ್ಥಿ ಅಯ್ಯಸಾಮಿ ಎಂಬವರ ಮೇಲೆ ಮೇಲ್ಜಾತಿಯ ಮೂವರು ದುರುಳರು ಹಲ್ಲೆ ನಡೆಸಿದ್ದಾರೆ. ಮೂವರು ಆರೋಪಿಗಳಾದ ವಿನೋತ್, ಆದಿ ಈಶ್ವರನ್ ಮತ್ತು ವಲ್ಲರಸು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ದಲಿತ ವಿದ್ಯಾರ್ಥಿ ಅಯ್ಯಸಾಮಿ ತನ್ನ ಚಿಕ್ಕಪ್ಪನ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಆತನನ್ನ ಅಡ್ಡಗಟ್ಟಿದ ದುರುಳರು ಆತನಿಗೆ ಜಾತಿ ನಿಂದನೆ ಮಾಡಿದ್ದಾರೆ. ಬಳಿಕ, ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅಯ್ಯಸಾಮಿಯನ್ನು ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅಯ್ಯಸಾವಿ ಅವರ ತಾಯಿ ಸಿಪ್ಕಾಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ ೨೯೪(ಬಿ), ೧೨೬, ೧೧೮(೧), ೩೫೧(೩) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ ೩(೧)(ಆರ್) ಮತ್ತು ೩(೧)(ಗಳು) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.