ಬೆಂಗಳೂರು: ಜಾತಿ ಆಧಾರಿತ ಗಣತಿ ವರದಿಯು ರಾಜ್ಯದ ರಾಜಕೀಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ವರದಿಯನ್ನು ತೀವ್ರವಾಗಿ ಟೀಕಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, “ಸಿಎಂ ಸಿದ್ದರಾಮಯ್ಯನವರ ಗ್ಯಾಂಗ್ ಎಲ್ಲೋ ಕುಳಿತು ಸಿದ್ಧಪಡಿಸಿದ ಜಾತಿ ಗಣತಿ ವರದಿಯನ್ನು ಯಾರೂ ಒಪ್ಪಬೇಕಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರದಿಗೆ ಸಹಿ ಹಾಕದೆ ಡೀಟಿಎನ್‌ಐ ಅಧ್ಯಕ್ಷ ಕಾಂತರಾಜು ಹೊರಟಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಜಯಪ್ರಕಾಶ್ ಹೆಗ್ಡೆ ವರದಿಯನ್ನು ಪರಿಶೀಲಿಸಿದಾಗ ಅದು ಮೂಲ ವರದಿ ಅಲ್ಲದೆ ಕೇವಲ ಪ್ರತಿಯೆಂದು ತಿಳಿದುಬಂದಿದೆ. ಹೆಗ್ಡೆ ಅವರೇ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಅವರು ಉಲ್ಲೇಖಿಸಿದರು.
“ಇದು ಒಂದು ಪರಿಕಲ್ಪಿತ ವರದಿ”
ಅಶೋಕ ಮುಂದುವರೆದು, “ಹತ್ತುವರ್ಷಗಳಲ್ಲಿ ಒಂದೂವರೆ ಕೋಟಿ ಮಕ್ಕಳು ಜನಿಸಿದರು ಎಂದರೆ, ಅವರು ಯಾವ ವರ್ಗಕ್ಕೆ ಸೇರುತ್ತಾರೆ? ಈ ಹೊಸ ಪೀಳಿಗೆಯ ಭವಿಷ್ಯ ಏನು? ಮೀಸಲಾತಿಯ ಮಾನದಂಡ ಹೇಗೆ ನಿಗದಿಯಾಗುತ್ತದೆ?” ಎಂಬ ಪ್ರಶ್ನೆಗಳನ್ನು ಎತ್ತಿದರು. ಜಾತಿ ಗಣತಿ ಮಾಡುವ ವಿಧಾನ ವೈಜ್ಞಾನಿಕವಾಗಿಲ್ಲವೆಂದು ಆರೋಪಿಸಿದರು. ಸಮೀಕ್ಷೆ ಮಾಡುವವರು ಶ್ರೇಷ್ಠವಾದ ಸಿದ್ದಗಂಗಾ ಮಠಕ್ಕೆ ಹೋಗಿಲ್ಲ ಎಂದು ಧ್ವನಿ ಎತ್ತಿದ ಅವರು, ದತ್ತಾಂಶವನ್ನು ಕೇವಲ ಒಂದು ಕಡೆ ಕುಳಿತು ಬರೆಯಲಾಗಿದೆ ಎಂದರು.
“165 ಕೋಟಿ ರೂ. ಎಲ್ಲಿಗೆ ಹೋದವು?”
“ಈ ಗಣತಿ ಪ್ರಕ್ರಿಯೆಗೆ 165 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ಹಣ ಎಲ್ಲಿಗೆ ಹೋದದು? ಶಾಲಾ ಮಕ್ಕಳನ್ನು ಸಮೀಕ್ಷೆಗೆ ಬಳಸಲಾಗಿದೆ. ಇದು ಸರಿಯಾದ ಪ್ರಕ್ರಿಯೆಯೇ?” ಎಂದು ಅವರು ಪ್ರಶ್ನಿಸಿದರು. ಜಾತಿ ಗಣತಿಯಲ್ಲಿ ಮುಸ್ಲಿಮರು ಬಹುಸಂಖ್ಯಾತರು ಎಂಬ ಮಾಹಿತಿ ಬಂದಿದೆ ಎಂದು ಉಲ್ಲೇಖಿಸಿದ ಅವರು, ಅವರನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ತಕ್ಷಣ ತೆಗೆದುಹಾಕಬೇಕೆಂದು ಒತ್ತಾಯಿಸಿದರು.
ಸಿಎಂ ವಿರುದ್ಧ ಕಿಡಿಕಾರಿಕೆ
ಅಶೋಕ ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವವನ್ನೂ ಟೀಕಿಸಿದರು. “ನವೆಂಬರ್‌ನಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇರುವ ಸಿದ್ದರಾಮಯ್ಯ, ಈ ವರದಿಯನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಕಾಲದಲ್ಲೇ ಈ ವರದಿಯನ್ನು ಬಿಡುಗಡೆ ಮಾಡಬಹುದಿತ್ತು” ಎಂದರು.
ಸಂಪುಟದಲ್ಲಿ ನಡೆದ ಚರ್ಚೆಯೂ ವಿಫಲವಾಗಿದೆ ಎಂದು ಹೇಳಿದ ಅವರು, ಸಚಿವರನ್ನು ಜಾತಿಯ ಬಲೆಗೆ ಸಿಕ್ಕಿಸುವ ಮೂಲಕ ಅವರನ್ನು ಅಪಮಾನಿಸಲಾಗಿದೆ ಎಂದರು. ಕಾಂಗ್ರೆಸ್ ಶಾಸಕರೂ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರಿಗೂ ಈ ವರದಿಯಲ್ಲಿ ನಂಬಿಕೆ ಹೋಗಿದೆ ಎಂದರು.
“ಹಿಂದುಗಳಿಗೆ ಅಪಮಾನ”
ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣರಿಗೆ ಜನಿವಾರ ಧರಿಸಲು ಅವಕಾಶ ನೀಡದೆ ಸರ್ಕಾರ ಹಿಂದುಗಳಿಗೆ ಅಪಮಾನ ಮಾಡಿದೆ ಎಂದು ಅಶೋಕ ಕಿಡಿಕಾರಿದರು. “ಬ್ರಾಹ್ಮಣರು, ಮರಾಠರು, ವೈಶ್ಯ ಸಮುದಾಯದವರು ಜನಿವಾರ ಧರಿಸುತ್ತಾರೆ. ಈ ಎಲ್ಲರಿಗೂ ಅಪಮಾನವಾಗಿದೆ. ಆದರೆ ಮುಸ್ಲಿಂ ಹುಡುಗಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ. ಸಿಎಂ ಕ್ಷಮೆ ಕೇಳಬೇಕು, ಹಾಗೂ ಜವಾಬ್ದಾರಿಯ ಅಧಿಕಾರಿಗಳನ್ನು ಅಮಾನತು ಮಾಡಬೇಕು” ಎಂದು ಅವರು ಆಗ್ರಹಿಸಿದರು.
ವಕ್ಫ್ ವಿರುದ್ಧವೂ ವಾಗ್ದಾಳಿ
ಅಂತಿಮವಾಗಿ ವಕ್ಫ್ ಹೆಸರಿನಲ್ಲಿ ಜನರ ಜಮೀನುಗಳನ್ನು ನುಂಗಲಾಗುತ್ತಿದೆ ಎಂಬ ಆರೋಪವನ್ನೂ ಅವರು ಒತ್ತಿಸಿದರು. “ಸಿದ್ದರಾಮಯ್ಯ ಪ್ರಾಯೋಜಿತ ಮಂಗಳೂರು ಪ್ರತಿಭಟನೆ ಏರ್ಪಡಿಸಲಾಗಿದೆ. ಆದರೆ ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ನೀಡಲಾಗದು. ನೆಲದ ಕಾನೂನು ಎಲ್ಲರಿಗೂ ಅನ್ವಯವಾಗಬೇಕು” ಎಂದು ಸ್ಪಷ್ಟಪಡಿಸಿದರು.