ಪಾಟ್ನಾ (ಬಿಹಾರ) : ರಾಜಕೀಯ ರಣತಂತ್ರಕ್ಕೆ ಅಗತ್ಯ ಅಸ್ತ್ರವಾಗಿರುವ ಜಾತಿಗಣತಿಯನ್ನು ದೇಶಾದ್ಯಂತ ನಡೆಸಬೇಕು ಎಂಬ ಕೂಗು ಕೇಳಿಬರುತ್ತಿರುವ ನಡುವೆಯೇ ಬಿಹಾರದಲ್ಲಿ ಜಾತಿ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ನಿತೀಶ್‌ಕುಮಾರ್ ನೇತೃತ್ವದ ಮೈತ್ರಿ ಸರ್ಕಾರ ಸೋಮವಾರ ಪ್ರಕಟಿಸಿದೆ. ರಾಜ್ಯದಲ್ಲಿ ಶೇಕಡಾ ೬೩ ಪ್ರತಿಶತ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಇದ್ದಾರೆ ಎಂದು ಅಂಕಿ ಅಂಶಗಳು ಹೇಳಿವೆ.
ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅತ್ಯಂತ ಹಿಂದುಳಿದ ವರ್ಗದವರಿದ್ದಾರೆ. ಅವರ ಸಂಖ್ಯೆ ಶೇಕಡಾ ೩೬.೦೧ ರಷ್ಟಿದೆ. ಹಿಂದುಳಿದ ವರ್ಗದವರು ಶೇಕಡಾ ೨೭.೧೨ ರಷ್ಟಿದ್ದಾರೆ. ಈ ಎರಡು ಸಮುದಾಯಗಳ ಒಟ್ಟು ಪ್ರಮಾಣ ೬೩ ಪ್ರತಿಶತದಷ್ಟಿದೆ. ಕುರ್ಮಿಗಳು ೨.೮೭ ಪ್ರತಿಶತದಷ್ಟಿದ್ದು, ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸಬೇಕು ಎಂಬ ವಾದವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್, ಯಾವುದೇ ರಾಜ್ಯಗಳ ಸಾಂವಿಧಾನಿಕ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಬೆನ್ನಲ್ಲೇ, ಬಿಹಾರ ಸರ್ಕಾರ ತಾನು ನಡೆಸಿದ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ.
ಜಾತಿ ಗಣತಿ ಸಮೀಕ್ಷೆಯನ್ನು ರಾಜ್ಯದಲ್ಲಿ ೨ ಹಂತದಲ್ಲಿ ನಡೆಸಲಾಯಿತು. ಮೊದಲು ಜನವರಿ ೭ ರಿಂದ ೨೧ರ ವರೆಗೆ ನಡೆದರೆ, ೨ನೇ ಹಂತದ ಸಮೀಕ್ಷೆ ಏಪ್ರಿಲ್ ಮತ್ತು ಆಗಸ್ಟ್‌ನಲ್ಲಿ ನಡೆಸಲಾಗಿತ್ತು. ಸಾಮಾಜಿಕ, ಆರ್ಥಿಕ, ಜಾತಿ, ಉದ್ಯೋಗ, ಶಿಕ್ಷಣ, ವೈವಾಹಿಕ ಸ್ಥಿತಿ, ಭೂ ಹಿಡುವಳಿಗಳು ಮತ್ತು ಆಸ್ತಿ ಮಾಲೀಕತ್ವದ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ.
ವಿವಿಧ ಜಾತಿಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ನೈಜ ಚಿತ್ರಣವನ್ನು ಅರಿಯಲು ಸಮೀಕ್ಷೆ ನಡೆಸಲಾಗಿದೆ. ಅದು ಪೂರ್ಣಗೊಂಡು ದಾಖಲೆಗಳ ವಿಶ್ಲೇಷಣೆ ನಡೆಸಿ ಈಗ ಪ್ರಕಟಿಸಲಾಗಿದೆ. ದೇಶಾದ್ಯಂತ ಸಮೀಕ್ಷೆಯನ್ನು ನಡೆಸದ ಕಾರಣ ನಮ್ಮ ಸರ್ಕಾರವೇ ಮುಂದಾಗಿ ಮಾಡಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದರು.