- ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸೀಪ್ಟ್ ಕಾರ್ ಗಳಿಗಿಂತಲು ದುಬಾರಿ ರಾಸುಗಳು …. ಕೃಷಿಯಂತ್ರೋಪಕರಣಗಳು ಬಂದರು ರೈತರ ಅಭಿಮಾನ ಮತ್ತು ಪ್ರೀತಿಗೆ ಸಾಕ್ಷಿ ಯಾಗಿರುವ ಜೋಡೆತ್ತುಗಳು… ಇಲ್ಲಿ ಎಲ್ಲಿ ನೋಡಿದರೂ ದೇಶಿ ತಳಿಯ ಗೋಸಂಪತ್ತಿನ ದರ್ಬಾರ್ … ಶ್ರೀಮಂತ ರೈತರ ವೈಭೋಗಕ್ಕೆ ರಾಸು ಗಳಿಗೆ ಶೃಂಗಾರಗೊಂಡ ಚಪ್ಪರ…. ಜಾನುವಾರುಗಳನ್ನು ಕೊಳ್ಳುವ ಮಾರಾಟ ಮಾಡುವ ಭರ್ಜರಿ ಭರಾಟೆ… ಜಾತ್ರೆ ನೋಡಲು ಹರಿದು ಬರುತ್ತಿರುವ ಜನಸಾಗರ…
ಇವು ಮೈಸೂರು ಜಿಲ್ಲೆಯಲ್ಲಿ ಭತ್ತದ ಕಣಜ ಎಂದೇ ಹೆಸರು ಪಡೆದಿರುವ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆಯಲ್ಲಿ ಕಂಡು ಬರುತ್ತಿರುವ ಸುಗ್ಗಿಯ ನಂತರ ನಡೆಯುವ ದಕ್ಷಿಣ ಭಾರತದ ಮೊದಲ ಗ್ರಾಮೀಣ ಸಂಸ್ಕೃತಿ, ಸೊಗಡು ಬಿಂಬಿಸುವ ಜಾನುವಾರು ಜಾತ್ರೆಯ ದೃಶ್ಯ ವೈಭವಗಳು.

ಜನವರಿ 5 ರಿಂದ ಆರಂಭ ಗೊಳ್ಳಬೇಕಿದ್ದ ಈ ಜಾನುವಾರು ಜಾತ್ರೆ ಈ ಬಾರಿ ಜನವರಿ 3 ರಿಂದಲೇ ಭರ್ಜರಿಯಾಗಿ ಆರಂಭಗೊಂಡಿರುವ ಚುಂಚನಕಟ್ಟೆ ಜಾನುವಾರು ಜಾತ್ರೆಯಲ್ಲಿ ಸಿಂಗಾರಗೊಂಡ ಜಾನುವಾರುಗಳ ಮೇಳ ಕಿ.ಮೀ. ಗಟ್ಟಲೆ ಕಂಡು ಬರುತ್ತಿದ್ದು, ಸುಗ್ಗಿಯ ದಣಿವನ್ನು ತಣಿಸಿಕೊಳ್ಳಲು ರೈತರು ಜಾನುವಾರು ಜಾತ್ರೆಯತ್ತ ಮುಗಿ ಬೀಳುತ್ತಿದ್ದು 30 ಸಾವಿರ ರೂ.ಗಳಿಂದ ಆರಂಭಿಸಿ 8 ಲಕ್ಷಕ್ಕೂ ಅಧಿಕ ಬೆಲೆಬಾಳುವ ದುಬಾರಿ ಎತ್ತುಗಳು ಜಾತ್ರೆಯಲ್ಲಿ ಜನಾಕರ್ಷಣೆಯ ಕೇಂದ್ರಬಿಂದುವಾಗಿವೆ.
ಸುಗ್ಗಿಯ ನಂತರ ನಡೆಯವ ಮತ್ತು ದಕ್ಷಿಣ ಭಾರತದಲ್ಲಿ ಅತ್ಯಂತ ಹೆಸರುವಾಸಿಯಾದ ಚುಂಚನಕಟ್ಟೆ ಜಾತ್ರೆಯಲ್ಲಿ ಈಗ ಮೈಸೂರು ಜಿಲ್ಲೆ ಮಾತ್ರವಲ್ಲದೇ ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ತುಮಕೂರು, ಕೋಲಾರ ಸೇರಿದಂತೆ ಇನ್ನಿತರ ಜಿಲ್ಲೆಗಳ ರೈತರು ಪ್ರತಿಷ್ಠೆಗೆ ಬಿದ್ದವರಂತೆ ಜಾನುವಾರು ಗಳನ್ನು ಇಲ್ಲಿಗೆ ವಾದ್ಯಗೋಷ್ಠಿಯ ಮೆರವಣಿಗೆಯ ಮೂಲಕ ಕರೆತರುತ್ತಿರುವುದು ನೋಡಲು ಎರಡು ಕಣ್ಣು ಸಾಲದಾಗಿದೆ.
ಚುಂಚನಕಟ್ಟೆಯ ಜಾನುವಾರು ಜಾತ್ರೆ ಯಲ್ಲಿ ಸದ್ಯ ಪಶುಸಂಗೋಪನೆ ಇಲಾಖೆಯ ಮಾಹಿತಿಯ ಪ್ರಕಾರ ಸುಮಾರು 8ರಿಂದ 10 ಸಾವಿರಕ್ಕೂ ಅಧಿಕ ಜೋಡಿ ಎತ್ತುಗಳು ಬಂದಿದ್ದು, ರೈತರು ತಮ್ಮ ರಾಸುಗಳ ಮೇಲಿರುವ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ತಮ್ಮ ರಾಸುಗಳಿಗೆ ಬೃಹತ್ ಶಾಮಿಯಾನ, ವಿದ್ಯುತ್ ಅಲಂಕಾರಿಕ ಚಪ್ಪರಗಳನ್ನು ಹಾಕಿಸಿ ದೇಶಿ ತಳಿಯ ಗೋಸಂಪತ್ತಿನ ರಾಜ ದರ್ಬಾರ್ ನಡೆಸುತ್ತಿರುವುದು ಅಕರ್ಷಣೀಯವಾಗಿದೆ.
ಸದ್ಯ ರೈತರಿಗೆ ಕೃಷಿ ಯಂತ್ರೋಪಕರಣಗಳು ಹೆಜ್ಜೆ-ಹೆಜ್ಜೆಗೂ ಸಿಗುತ್ತಿದ್ದರು ಸಹ ರೈತರಿಗೆ ಮಾತ್ರ ಜೊಡೆತ್ತುಗಳ ಮೇಲೆ ಪ್ರೀತಿ ಕಮ್ಮಿಯಾಗುತ್ತಿಲ್ಲ ಇದರಿಂದಲೇ ಚುಂಚನಕಟ್ಟೆ ಜಾತ್ರೆಯ ರಾಸುಗಳಿಗೆ ರಾಜ್ಯದಲ್ಲಿಯೇ ಉತ್ತಮ ಹೆಸರಿದ್ದು ಅಲ್ಲದೇ `”ಗಂಡು ರಾಸುಗಳ ಜಾತ್ರೆ” ಎಂದೇ ಹೆಸರು ಪಡೆದಿರುವ ಈ ಜಾತ್ರೆಯ ವಿಶೇಷವೆಂದರೆ ಭಾಗಶಃ ಎತ್ತುಗಳೇ ಭಾಗವಹಿಸುವುದು ಮಾತ್ರ ವಲ್ಲದೇ ಬೀಜದ ಹೋರಿಗಳು ಮತ್ತು ಹೆಚ್ಚು ದುಡಿಮೆಗೆ ಒಗ್ಗುವ ಹಳ್ಳಿ ಕಾರ್ ತಳಿಯ ಎತ್ತುಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿವೆ
ಚುಂಚನಕಟ್ಟೆಯು ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೆಸರು ವಾಸಿಯಾಗಿದ್ದು, ಇಲ್ಲಿಗೆ ರಾಸುಗಳನ್ನು ಕೊಳ್ಳಲು ದೂರದ ಕೊಡಗು, ಗದಗ, ಹುಬ್ಬಳ್ಳಿ, ಧಾರವಾಡ, ಕಲಬರುಗಿ, ವಿಜಯಪುರ ದಾವಣಗೆರೆ, ಶಿವಮೊಗ್ಗ ಸೇರಿ ದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಮತ್ತು ಆಂಧ್ರ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇನ್ನಿತರ ಕಡೆ ಯಿಂದ ರೈತರು ಬರುತ್ತಿದ್ದು, ಇದು ಜಾತ್ರೆಯಲ್ಲಿ ಭಾಗವಹಿಸುವ ರೈತರಲ್ಲಿ ಕೋಟ್ಯಾಂತರ ರೂಗಳ ಉತ್ತಮ ವ್ಯವಹಾರದ ನಿರೀಕ್ಷೆಯಲ್ಲಿದ್ದಾರೆ.
ಪಶು ಆಹಾರ ಏರಿಕೆಯ ನಡುವೆಯೂ ರೈತರು ಮಾತ್ರ ರಾಸುಗಳ ಮೇಲೆ ಇಟ್ಟಿರುವ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ ರಾಸುಗಳನ್ನು ಕೊಳ್ಳುವುದು ಮತ್ತು ಮಾರುವುದರಲ್ಲೂ ಸಾಕಷ್ಟು ಲಾಭ ದೊರೆಯುವುದರಿಂದ ಮತ್ತು ಉತ್ತಮ ರಾಸುಗಳ ಕೊಳ್ಳುವಿಕೆಗೆ ಈ ಚುಂಚನಕಟ್ಟೆ ಜಾನು ಜಾತ್ರೆ ಉತ್ತಮ ವೇದಿಕೆಯಾಗುತ್ತಿದ್ದು ಇದರಿಂದಲೇ ರೈತರು ಮತ್ತು ದಲ್ಲಾಳಿಗಳು ಇತ್ತ ಮುಖಮಾಡಿ ಭರ್ಜರಿ ಲಾಭಗಳಿಸುತ್ತಿರುವುದು ವಿಶೇಷವಾಗಿದೆ.
ಈಗಾಗಲೇ ಸಾವಿರಾರು ರೈತರು ತಮ್ಮ ಎತ್ತುಗಳನ್ನು ಜಾತ್ರಾ ಮಾಳಕ್ಕೆ ಕರೆತರುವಾಗ ಸಾವಿರಾರು ರೂ ಖರ್ಚು ಮಾಡಿ ನೂರಾರು ಮಂದಿಗೆ ಔತಣಕೂಟವನ್ನು ಏರ್ಪಡಿಸಿ ವಾದ್ಯ ಗೋಷ್ಠಿ ಮತ್ತು ಅದ್ಧೂರಿ ಮೆರವಣಿಗೆ ಮೂಲಕ ತಂದಿದ್ದು, ಜತಗೆ ನಿತ್ಯ ಹಾಲು, ರವೆ, ತುಪ್ಪ ಮತ್ತಿತರ ಪೌಷ್ಟಿಕಾಂಶಭರಿತ ‘ಮೃಷ್ಟಾನ್ನ ಭೋಜನ ಉಣಬಡಿಸುತ್ತಾ ತಮ್ಮ ರಾಸುಗಳ ಮೇಲಿರುವ ಕಾಳಜಿಯನ್ನು ತೋರುತ್ತಿರುವ ರೈತರ ಕಾಳಜಿ ನಿಜಕ್ಕು ರೈತರು ಜಾನು ವಾರುಗಳ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿಯಾಗುತ್ತಿದೆ ಈ ಜಾತ್ರೆ.

ಜಾತ್ರೆಯಲ್ಲಿ ಬೀಡು ಬಿಟ್ಟ ಆರೋಗ್ಯ ಮತ್ತು ಪಶು ಇಲಾಖೆ
ಇನ್ನು ಜಾತ್ರೆಯಲ್ಲಿ ರಾಸುಗಳಿಗೆ ಯಾವುದೇ ರೋಗ ರುಜಿನಗಳು ಬಾರದಂತೆ ಶಾಸಕ ಡಿ.ರವಿಶಂಕರ್ ಅವರ ಸೂಚನೆಯ ಮೇರಗೆ ಕೆ.ಆರ್.ನಗರ ತಾಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಮಂಜುನಾಥ್ ಅವರ ನೇತೃತ್ವದಲ್ಲಿ ಪಶುವೈದ್ಯಾಧಿಕಾರಿಗಳಾದ ಮೂಲೆಪೆಟ್ಲು ಸಂಜಯ್, ಪಶುಪರಿಕ್ಷಕರಾದ ಎಚ್.ಜೆ. ಸಿದ್ದರಾಜು, ಚಿಕ್ಕೇಗೌಡ, ರೇವಣ್ಣ, ಎಚ್.ಜೆ.ರಾಮೇಗೌಡ, ಸಿಬ್ಬಂದಿಗಳಾದ ಸೋಮಶೇಖರ್, ಋಷಿಕುಮಾರ,ಪ್ರತಾಪ್ ಮುಂತಾದವರು ಇಲ್ಲಿನ ಮಂಟದ ಬಾರೆಯಲ್ಲಿ ತಾತ್ಕಲಿಕ ಪಶು ಚಿಕಿತ್ಸಾಲಯವನ್ನು ತೆರೆದು ಶ್ರಮಿಸುತ್ತಿರುವುದು ರೈತರ ಮೆಚ್ಚುಗೆಗೆ ಪಾತ್ರವಾಗಿದೆ.
“ಜಾತ್ರೆಯಲ್ಲಿ ಮನ ಸೆಳೆಯುವ ರಾಸುಗಳು “
ಚುಂಚನಕಟ್ಟೆ ಜಾನುವಾರು ಜಾತ್ರೆಯಲ್ಲಿ ಸೀಪ್ಟ್ ಕಾರ್ ಗಿಂತಲು ರಾಸುಗಳು ಬೆಲೆ ಇದ್ದು ಚಿಕ್ಕಕೊಪ್ಪಲು ಪುನೀತ್ ಧನಪಾಲ್,ಹಳಿಯೂರು ಪುನೀತ್ ಪುಟ್ಟರಾಜು, ಚಿಕ್ಕಕೊಪ್ಪಲು ಗ್ರಾಮದ ಚಿರಂತ್ ಸಣ್ಣಮಾದ , ಹಾಸನದ ಚಿಕ್ಕೇಗೌಡ, ಬೆಣಗನಹಳ್ಳಿ ಗ್ರಾಮದ ಜಗದೀಶ್, ಹಾಡ್ಯ ಗ್ರಾಮದ ಮಹದೇವ್, ಹೆಬ್ಬಾಳು ಪಾಪೇಗೌಡ, ಹಿರಿಕ್ಯಾತನಹಳ್ಳಿ ಶೀನೇಗೌಡ, ಅರಲಗೂಡು ಮಲ್ಲಿನಾಥ ಪುರ ನಾರಾಯಣಗೌಡ,ಕಾಳೇನಹಳ್ಳಿ ಪ್ರಭಾಕರ್, ಹೊನ್ನವಳ್ಳಿಯ ಮಹೇಶ್, ಹಾಸನದ ಕಿತ್ತಾನೆಯ ಲೋಕೇಶ್, ಕುಶಾಲನಗರದ ಹೆಬ್ಬಾಲೆ ಮೊಗ್ಗಣ್ಣ, ತೊರೆನೂರು ಪೊಲೀಸ್ ಸಂತೋಷ್, ಅಂಕನಹಳ್ಳಿ ಜನಾರ್ಧನ್, ಚಿಕ್ಕಹನಸೋಗೆ ಅಭಿ, ಮಿರ್ಲೆ ಶಿವಣ್ಣ, ಎಂ.ಸಿ.ಕುಮಾರ್, ಬಂಡಹಳ್ಳಿ ಪ್ರಕಾಶ್, ರಘು ಸೇರಿದಂತೆ ಮತ್ತಿತರರ ರಾಸುಗಳು ರಾಸುಗಳ ಪ್ರಿಯರನ್ನು ಗಮನ ಸೆಳೆಯುತ್ತಿವೆ.
“ವ್ಯಾಪಾರಿಗಳ ಗಮನ ಸೆಳೆಯಲು ರಾಸುಗಳ ಕ್ಯಾಟ್ ವಾಕ್”
ಜಾತ್ರೆಯ ಮಾಳದಲ್ಲಿ ಅಲಕಾಂರಗೊಂಡ ರಾಸುಗಳನ್ನು ಕ್ಯಾಟ್ ವಾಕ್ ಮಾದರಿಯಲ್ಲಿ ರಸ್ತೆಗಳಲ್ಲಿ ನಡೆಸಿ ತಮ್ಮ ರಾಸುಗಳ ಬಗ್ಗೆ ಖರೀದಿದಾರರನ್ನು ಆಕರ್ಷಿಸುವ ಪ್ರಯತ್ನ ಮಾಡುವ ರೈತರ ಪ್ರಯತ್ನ ಗಮನ ಸೆಳೆಯುತ್ತಿದೆ.
ವರ್ಣ ರಂಜಿತ ಲೈಟಿಂಗ್ಸ್ ವ್ಯವಸ್ಥೆ
ಜಾತ್ರೆ ಆರಂಭವಾಗಿರುವ ಹಿನ್ನಲೆಯಲ್ಲಿ ಚುಂಚನಕಟ್ಟೆ ಬಸವನ ವೃತ್ತ, ಶ್ರೀರಾಮ ದೇವಾಲಯ ಸುತ್ತ ವರ್ಣ ರಂಜಿತ ಮತ್ತುಮತ್ತು ಜಾತ್ರಾ ಮಾಳದಲ್ಲಿ ಉತ್ತಮ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿದ್ದು ರಾತ್ರಿ ಆಗುತ್ತಿದ್ದಂತೆಯೇ ಈ ಗ್ರಾಮ ಸ್ವರ್ಗದ ಕಿಚ್ಚು ಹಚ್ಚಿಸುವಂತೆ ಮಾಡುತ್ತಿದೆ.
ಇದೀಗ ಚುಂಚನಕಟ್ಟೆ ಜಾನುವಾರು ಜಾತ್ರೆಗೆ ಉತ್ತಮ ಆರಂಭ ದೊರೆಯುತ್ತಿದ್ದಂತೆಯೇ ಇಲ್ಲಿ ಹಾಕಲಾಗಿರುವ ಸಿಹಿ ತಿಂಡಿ, ಜ್ಯೂಸ್, ಪಾನಿಪುರಿ,ಗೋಬಿ, ನೋಗ, ಓನಕೆ, ಸೇರಿದಂತೆ ವಿವಿಧ ಬಗೆಯ ಆಟಿಕೆಗಳ ಅಂಗಡಿ ಮುಗ್ಗಟ್ಟು ಮತ್ತು ವಿವಿಧ ಬಗೆಯ ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್‍ಗಳಿಗೆ ಭರ್ಜರಿ ವ್ಯಾಪಾರ ಶುರುವಾಗಿದ್ದು ಇದರಿಂದ ದೂರದ ಊರುಗಳಿಂದ ಬಂದ ಪ್ರವಾಸಿಗರು ಜಾತ್ರೆಯ ಸೊಬಗನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಇತ್ತೀಚಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಆಧುನಿಕ ಜೀವನ ಶೈಲಿಯಿಂದ ಮರೆಯಾಗುತ್ತಿರುವ ಗ್ರಾಮೀಣ ಪರಂಪರೆಯ ನಡುವೆಯೂ ಇಲ್ಲಿನ ಜಾನು ವಾರು ಜಾತ್ರೆಯ ಸೊಬಗನ್ನು ಕಣ್ತುಂಬಿ ಕೊಳ್ಳಲು ಮತ್ತು ಶ್ರೀರಾಮದೇವರ ದೇವಾ ಲಯ, ಕಾವೇರಿ ನದಿಯ ಜಲಪಾತ, ಜಾತ್ರೆಯ ತಿಂಡಿತಿನಿಸುಗಳನ್ನು ಸವಿಯಲು ಇಲ್ಲಿಗೆ ನೀವೂ ಒಮ್ಮೆ ಬರಬೇಕು. ಅದ ಕ್ಕಾಗಿ ಕೈಬೀಸಿ ಕರೆಯುತ್ತಿದೆ ಚುಂಚನಕಟ್ಟೆ ಜಾನುವಾರು ಜಾತ್ರೆ.
ಗಮನ ಹರಿಸದ ಪೊಲೀಸ್ ಇಲಾಖೆ : ಚುಂಚನಕಟ್ಟೆ ಜಾನುವಾರು ಜಾತ್ರೆ ಭರ್ಜರಿಯಾಗಿ ಆರಂಭಗೊಂಡು ಜನಸಾಗರವೇ ಹರಿದು ಬರುತ್ತಿದ್ದು, ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತಿರುವ ಈ ಜಾತ್ರೆಯ ಬಗ್ಗೆ ಪೊಲೀಸ್ ಇಲಾಖೆಯು ಇಲ್ಲಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿಲ್ಲ ಇದರಿಂದ ಜಾತ್ರಾ ಮಾಳದಲ್ಲಿ ರಾತ್ರಿ ತಂಗುವ ರೈತರಿಗೆ ಕಳ್ಳಕಾಕರ ಭಯ, ಮತ್ತು ಮುಖ್ಯ ರಸ್ತೆಯಲ್ಲಿ ಸಂಚಾರದ ಸಮಸ್ಯೆ ಎದುರು ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸ ಬೇಕಿದೆ.
ಧೂಳುಮಯ ರಸ್ತೆಗಳು : ಜಾನುವಾರು ಜಾತ್ರೆ ಆರಂಭ ಗೊಂಡಿದ್ದರು ಸಾಲಿಗ್ರಾಮ ತಾಲೂಕು ಆಡಳಿತ ಮಾತ್ರ ಮೌನಕ್ಕೆ ಶರಣು ಆಗಿದೆ. ಜಾತ್ರೆಯಲ್ಲಿನ ರಸ್ತೆಗಳು ಧೂಳುಮಯವಾಗುತ್ತಿದ್ದು ಕನಿಷ್ಟ ಪಕ್ಷ ರಸ್ತೆಗೆ ನೀರು ಹಾಕಿಸಿ ಧೂಳು ಏಳದಂತೆ ಮಾಡಲು ಮುಂದಾಗದೇ ಇರುವುದು ಮತ್ತು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡದಿರುವುದು ಜಾತ್ರಾ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ .ದನಗಳು ಹಾಕುವ ಸಗಣಿಯಿಂದಲು ಆದಾಯ ಮಾಡಿಕೊಳ್ಳುವ ತಾಲೂಕು ಆಡಳಿತ ಜಾತ್ರೆ ನಿರ್ಲಕ್ಷ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.