ನವದೆಹಲಿ: ಕಾವೇರಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಇಂದು (ಆಗಸ್ಟ್ ೨೫) ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಬರುವ ಶುಕ್ರವಾರಕ್ಕೆ(ಸೆಪ್ಟೆಂಬರ್ ೦೧) ಮುಂದೂಡಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ತಜ್ಞರಿದ್ದಾರೆ . ನಾವು ತಜ್ಞರಲ್ಲ ಹಾಗಾಗಿ ಯಾವುದನ್ನೂ ತನಿಖೆ ಮಾಡದೆ ತಕ್ಷಣ ಆದೇಶ ಹೊರಡಿಸುವುದು ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದು, ಈ ಮಧ್ಯಂತರ ಅವಧಿಯಲ್ಲಿ ಸಭೆ ಕರೆಯುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಿದೆ.
ಮೊದಲಿಗೆ ವಾದ ಆರಂಭಿಸಿದ ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ, ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ೪೦ ಟಿಎಂಸಿ ನೀರು ಬಿಡುತ್ತಿಲ್ಲ. ಅಲ್ಲದೇ ೧೫ ದಿನಗಳು ೧೦ ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿತ್ತು. ಇದು ಮುಂದಿನ ೨೦ ದಿನಗಳಿಗೆ ಮುಂದುವರೆಯಬೇಕು ಸುಪ್ರೀಂಕೋರ್ಟ್ ತ್ರೀಸದಸ್ಯ ಪೀಠದ ಮುಂದೆ ವಾದ ಮಂಡಿಸಿದರು.
ಮಳೆ ಪ್ರಮಾಣ ಕಡಿಮೆ ಇದೆ. ಹೀಗಾಗಿ ನೀರಿನ ಪ್ರಮಾಣ ತುಂಬಾ ಕಡಿಮೆ ಇದೆ. ಈ ವಿಚಾರವನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಹೇಳಲು ಪ್ರಯತ್ನಿಸಿದಾಗ ತಮಿಳುನಾಡು ಸರ್ಕಾರದ ಅಧಿಕಾರಿಗಳು ಕೇಳದೆ ಸಭೆಯಿಂದ ಹೊರನಡೆದಿದ್ದಾರೆ ಎಂದು ಕರ್ನಾಟಕ ಪರ ಶ್ಯಾಮ ದಿವಾನ್ ವಾದ ಮಂಡಿಸಿದರು. ಎರಡೂ ರಾಜ್ಯಗಳ ಪರ ವಕೀಲರ ವಾದ -ಪ್ರತಿವಾದ ಆಲಿಸಿದ ಸುಪ್ರೀಕೋರ್ಟ್ ತ್ರಿಸದಸ್ಯ ಪೀಠ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ ೧ಕ್ಕೆ ಮುಂದೂಡಿತು.
ಈ ಬಾರಿ ಕಾವೇರಿ ಕೊಳ್ಳದಲ್ಲಿ ಶೇ.೪೨ರಷ್ಟು ಮಳೆ ಕೊರತೆಯಿದೆ. ಕರ್ನಾಟಕ ಸಿಡಬ್ಲ್ಯುಎಂಎ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದೆ. ಸಾಮಾನ್ಯ ವರ್ಷದಂತೆ ನೀರು ಹರಿಸಲು ತಮಿಳುನಾಡು ಕೇಳುತ್ತಿದೆ. ತಮಿಳುನಾಡು ೩೬.೭೬ ಟಿಎಂಸಿ ನೀರು ಹರಿಸುವಂತೆ ಕೇಳುತ್ತಿದೆ. ಆದ್ರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಕರ್ನಾಟಕದ ಜಲಾಶಯಗಳಲ್ಲಿ ೪೨% ಕಡಿಮೆ ನೀರು ಸಂಗ್ರಹವಾಗಿದೆ. ಕಾವೇರಿ ಜಲಾನಯನದಲ್ಲಿರುವ ನೀರು ಕರ್ನಾಟಕಕ್ಕೆ ಸಾಕಾಗುವುದಿಲ್ಲ. ಬೆಳೆ ಮತ್ತು ಕುಡಿಯುವ ನೀರಿಗೆ ಕೊರತೆಯಾಗಲಿದೆ. ಬೆಂಗಳೂರಿನಂತಹ ಮಹಾ ನಗರಕ್ಕೂ ನೀರಿನ ಕೊರತೆಯಾಗಲಿದೆ. ಅದಾಗ್ಯೂ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಿ ಆದೇಶವನ್ನು ಕರ್ನಾಟಕ ಪಾಲಿಸಿದೆ ಎಂದು ಅಫಿಡೆವಿಟ್‌ನಲ್ಲಿ ಉಲ್ಲೇಖಿಸಿದೆ.