ಮಂಡ್ಯ: ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರೆದಿದ್ದು, ಕನ್ನಡ ಸೇನೆ ವತಿಯಿಂದ ಪಟಾಪಟಿ ಚಡ್ಡಿ-ಖಾಲಿ ಬಿಂದಿಗೆ ಹಿಡಿದು ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ.
ಮಂಡ್ಯದ ಸಂಜಯ ವೃತ್ತದಲ್ಲಿ ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದ್ದು, ಕಾವೇರಿ ಹೋರಾಟ ಬೆಂಬಲಿಸದ ಸಂಸದರು, ಶಾಸಕರ ವಿರುದ್ಧ ಕನ್ನಡ ಸೇನೆ ಕಾರ್ಯಕರ್ತರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಮಂಡ್ಯ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತ ಹಿತರಕ್ಷಣಾ ಸಮಿತಿಯ ಧರಣಿ ಸ್ಥಳದ ವರೆಗೂ ಚಡ್ಡಿ ಮೆರವಣಿಣೆ ನಡೆದಿದೆ.
ಈ ವೇಳೆ ಮಾತನಾಡಿದ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಕಾವೇರಿ ಒಡಲನ್ನು ರಾಜ್ಯ ಸರ್ಕಾರ ಬರಿದು ಮಾಡ್ತಿದೆ. ಡಿಕೆ ಶಿವಕುಮಾರ್ ಮೇಕೆದಾಟು ಹೋರಾಟಕ್ಕೆ ರೈತರು ಬಂದಿಲ್ಲ ಅಂತ ಹೇಳಿದ್ದಾರೆ. ಈ ಮಾತನ್ನು ವಾಪಸು ಪಡೆಯಿರಿ. ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ. ನೀರಿಗೆ ಪರಿಹಾರ ಕಟ್ಟಿ ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಮಾತನಾಡೋದಕ್ಕೆ ಬನ್ನಿ ಎಂದು ಡಿ ಕೆ ಶಿವಕುಮಾರ್ ಅವರಿಗೆ ಸವಾಲ್ ಹಾಕಿದ್ದಾರೆ.
ಕಾವೇರಿ ಹೋರಾಟದ ತೀರ್ಪು ನಮ್ಮ ಪರ ಬರಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡ್ತೇವೆ ಎಂದು ಹೇಳಿದರು.