Saturday, April 19, 2025
Google search engine

Homeರಾಜ್ಯಸುದ್ದಿಜಾಲಕಾವೇರಿ ನೀರು ಹಂಚಿಕೆ: ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ಕಾವೇರಿ ನೀರು ಹಂಚಿಕೆ: ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಆದೇಶದ ಹಿನ್ನೆಲೆಯಲ್ಲಿ ಸರ್ವ ಪಕ್ಷದ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂಬ ಸ್ಪಷ್ಟ ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಮಂಡ್ಯದಲ್ಲಿ ರಸ್ತೆ ತಡೆ ನಡೆಸಿತು.

ನಗರದ ಸರ್ ಎಂ ವಿ ಪ್ರತಿಮೆ ಎದುರು ಧರಣಿ ನಿರತರಾಗಿದ್ದ ರೈತರು, ಕನ್ನಡ, ಪ್ರಗತಿಪರ ಹಾಗೂ ವಿವಿಧ ಸಂಘಟನೆಯ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ, ಕೇಂದ್ರ ಸರ್ಕಾರ ಹಾಗೂ ಮಂಡ್ಯ ಜಿಲ್ಲೆಯ ಶಾಸಕರು, ಸಂಸದರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.

ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿನಿತ್ಯ ೫೦೦೦ ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕೆಂದು ಸೂಚಿಸಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಹೋರಾಟಗಾರರಿಗೆ ಮಾತು ಕೊಟ್ಟಿತ್ತು. ಆದರೆ, ಸರ್ವಪಕ್ಷ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂದು ದೃಢ ನಿರ್ಧಾರ ಮಾಡುವ ಬದಲು, ಕಾನೂನು ತಜ್ಞರ ಜೊತೆ ಮಾತುಕತೆ ನಡೆಸಿ, ನೀರು ಬಿಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದೆಂದು ಹೇಳಿರುವುದು ಕಾವೇರಿ ಕೊಳ್ಳದ ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಇಂತಹ ನಿಲುವು ಗೊಂದಲಕಾರಿಯಾಗಿದ್ದು, ಸ್ಪಷ್ಟ ನಿರ್ಧಾರ ಮಾಡದೆ ಇರುವುದು ಅನುಮಾನ ಮೂಡಿಸಿದೆ. ನೆರೆ ರಾಜ್ಯಕ್ಕೆ ನೀರು ಬಿಡುವ ಹುನ್ನಾರ ಮಾಡಲಾಗಿದೆ ಎಂದು ದೂರಿದರು. ಕೆಆರ್ ಎಸ್ ನಲ್ಲಿ ನೀರಿನ ಮಟ್ಟ ೯೭ ಅಡುಗೆ ಕುಸಿದಿದೆ. ಕುಡಿಯಲು ಸಹ ನೀರು ಸಾಕಾಗುವುದಿಲ್ಲ. ಇಂತಹ ಸಮಯದಲ್ಲಿ ನೀರು ಬಿಟ್ಟರೆ ರಾಜ್ಯ ಸರ್ಕಾರವೇ ಸಂಪೂರ್ಣ ಹೊಣೆ ಎಂದ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ನಲ್ಲಿ ಸೆ. ೨೧ ರಂದು ನಡೆಯುವ ವಿಚಾರಣೆ ವೇಳೆ ಕಾವೇರಿ ಕೊಳ್ಳದ ಪ್ರದೇಶದಲ್ಲಿರುವ ಜಲಾಶಯಗಳ ವಾಸ್ತವ ಪರಿಸ್ಥಿತಿ ಕುರಿತು ಸಮರ್ಥ ವಾದ ಮಾಡುವ ಮೂಲಕ ರೈತರ ಹಿತ ಕಾಪಾಡಲು ಮುಂದಾಗಬೇಕಾಗಿದೆ ಎಂದು ಹೇಳಿದರು.

ಸಂಸದರು ಮತ್ತು ಶಾಸಕರು ಕಾವೇರಿ ವಿಚಾರದಲ್ಲಿ ರೈತಪರ ಹೋರಾಟಕ್ಕೆ ಇಳಿಯಬೇಕು. ರಾಜ್ಯ ಸರ್ಕಾರ ನೀರು ಬಿಡದಂತೆ ಒತ್ತಡ ಹಾಕಬೇಕು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸಂಕಷ್ಟ ಕಾಲದಲ್ಲಿ ಕರ್ನಾಟಕ ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಗೊಂದಲಕಾರಿ ನಿಲುವಿನಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ನೀರು ಬಿಡುವುದಿಲ್ಲ ಎಂದು ತೀರ್ಮಾನಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು. ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ. ಬೋರಯ್ಯ, ಮಾಜಿ ಶಾಸಕ ಕೆ. ಟಿ ಶ್ರೀಕಂಠೇಗೌಡ, ರೈತ ಸಂಘದ ಇಂಡವಾಳು ಚಂದ್ರಶೇಖರ್, ಮುದ್ದೇಗೌಡ, ಕೀಲಾರ ಕೃಷ್ಣ, ಮೈ ಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಕನ್ನಡಸೇನೆ ಮಂಜುನಾಥ್, ದಸಂಸ ಎಂ. ವಿ ಕೃಷ್ಣ ನೇತೃತ್ವ ವಹಿಸಿದ್ದರು.

RELATED ARTICLES
- Advertisment -
Google search engine

Most Popular