ಮಂಡ್ಯ: ಕೆಆರ್ ಎಸ್ ನಿಂದ ತಮಿಳುನಾಡಿಗೆ ನೀರು ಬಿಡುತ್ತಿರುವ ಹಿನ್ನೆಲೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ತೀವ್ರಗೊಂಡಿದ್ದು, ಬಿಜೆಪಿ ಕಾರ್ಯಕರ್ತರಿಂದ ರಾಜ್ಯಪಾಲರಿಗೆ ರಕ್ತ ಸಹಿ ಪತ್ರ ಚಳವಳಿ ನಡೆಸಿದ್ದಾರೆ.
ಮಂಡ್ಯ ಡಿಸಿ ಕಚೇರಿ ಬಳಿ ರಕ್ತ ಸಹಿ ಚಳವಳಿ ನಡೆಯುತ್ತಿದ್ದು, ರಕ್ತ ಸಹಿ ಮಾಡುವುದನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರ ಜೊತೆ ಬಿಜೆಪಿ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.
ನೀರು ಇಲ್ಲದೇ ಮಂಡ್ಯ ಜನ ಕಷ್ಟದಲ್ಲಿ ಇದ್ದಾರೆ. ರಾಜ್ಯಪಾಲರು ಮಧ್ಯಸ್ಥಿಕೆ ವಹಿಸಿ ಎಂದು ರಕ್ತ ಸಹಿ ಚಳವಳಿ ಮಾಡ್ತಾ ಇದೀವಿ. ನಮ್ಮನ್ನ ತಡೆಯಬೇಡಿ ಎಂದ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ತಿಳಿಸಿದ್ದಾರೆ.
ರಕ್ತ ಸಹಿ ಮಾಡಬೇಡಿ ಎಂದು ಕಾರ್ಯಕರ್ತರಿಗೆ ಪೊಲೀಸರು ಹೇಳಿದ್ದು, ಅದಕ್ಕೆ ಕಾರ್ಯಕರ್ತರು, ಯಾಕ್ ಸ್ವಾಮಿ ನಿಮಗೆ ನೀರು ಬೇಡ್ವಾ ? ನಿಮ್ಮ ಪರವಾಗಿಯೂ ನಾವು ಪ್ರತಿಭಟನೆ ಮಾಡ್ತಾ ಇದೀವಿ. ನಿಮಗೂ ಕಾವೇರಿ ನೀರು ಬೇಕು ಅಲ್ವಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ.
ಬಳಿಕ ರಕ್ತ ಸಹಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿದ್ದಾರೆ.
ಪತ್ರಕ್ಕೆ ರಕ್ತ ಸಹಿ ಮಾಡಿ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಲಾಗಿದೆ.ಸಹಿಯ ಬಳಿಕ ಮಂಡ್ಯ ಡಿಸಿಗೆ ಬಿಜೆಪಿ ಕಾರ್ಯಕರ್ತರು ಪತ್ರ ಕೊಡಲಿದ್ದಾರೆ.
ಈ ವೇಳೆ ರಕ್ತ ಕೊಟ್ಟೆವೂ ನೀರು ಕೊಡೆವೂ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ರೈತರ ಬಾಯಿಗೆ ರಾಜ್ಯ ಸರ್ಕಾರ ಮಣ್ಣು ಹಾಕ್ತಿದೆ. ತಕ್ಷಣವೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ ಎಂಪಿ-ಎಂಎಲ್ ಎ ಗಳ ವಿರುದ್ಧ ಹೋರಾಟ
ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತ ಸಿದ್ದರಾಜು ಮಾತನಾಡಿ, ನಮ್ಮ ಕತ್ತು ಕೊಯ್ದುಕೊಂಡರು ಸಹ ರಾಜ್ಯ ಸರ್ಕಾರ ನೀರನ್ನು ನಿಲ್ಲಿಸಲ್ಲ ಎಂದು ಆರೋಪಿಸಿದರು.

ತಮಿಳುನಾಡಿನ ಅಭಿಮಾನಕ್ಕೆ, ಚುನಾವಣೆಗಾಗಿ ನೀರು ಬಿಡುಗಡೆ ಮಾಡಲಾಗಿದ್ದು, ಕೂಡಲೇ ನೀರು ನಿಲ್ಲಿಸಿ ರೈತರನ್ನು ಉಳಿಸಿ. ಬೆಂಗಳೂರಿನ ಜನ ಪಬ್ ಕ್ಲಬ್ ಅಂತ ಕುಳ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನೀರು ಬಂದ್ ಮಾಡಿದರೆ ಅವರಿಗೆ ನೀರು ಸಿಗಲ್ಲ. ಜನರ ಮೇಲೆ ಅಭಿಮಾನ ಇದ್ರೆ ಸಿದ್ದರಾಮಯ್ಯ ಅವರೇ ನೀರು ನಿಲ್ಲಿಸಿ ಎಂದು ಒತ್ತಾಯಿಸಿದರು.
6 ಜನ ಕಾಂಗ್ರೆಸ್ ಶಾಸಕರು ಏನು ಮಾತನಾಡ್ತಿಲ್ಲ. ಮಂಡ್ಯ ಶಾಸಕ ಕಾವೇರಿ ಬಗ್ಗೆ ಹೇಳಿಕೆ ಕೊಟ್ಟು ಈಗ ಪತ್ತೆ ಇಲ್ಲ. ಅವರ ಬಾಯಿ ಯಾರು ಮುಚ್ಚಿಸಿದ್ದಾರೋ? ಎಂಪಿ ಅವರು ಒಂದು ದಿನ ಬಂದ್ರು ಅಷ್ಟೆ. ಚುನಾವಣೆಯಲ್ಲಿ ಮಾತ್ರ ಮಂಡ್ಯ ಜನ ಬೇಕು ಇವರಿಗೆ. ಮುಂದಿನ ದಿನಗಳಲ್ಲಿ ಎಂಪಿ-ಎಂಎಲ್ ಎ ಗಳ ವಿರುದ್ಧ ಹೋರಾಟ ಮಾಡುವುದಾಗಿ ತಿಳಿಸಿದರು.