ಮಂಡ್ಯ: ತಮಿಳುನಾಡಿಗೆ ಕೆ.ಆರ್.ಎಸ್ ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತಸಂಘದಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್ ಕರೆ ನೀಡಲಾಗಿದ್ದು, ಪ್ರತಿಭಟನೆ ಆರಂಭವಾಗಿದೆ.
ಇಂಡುವಾಳು ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಯತ್ತ ಎತ್ತಿನಗಾಡಿ, ಟ್ರ್ಯಾಕ್ಟರ್ ಜೊತೆ ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟಿದ್ದು, ಹೆದ್ದಾರಿ ಬಂದ್ ಮಾಡದಂತೆ ಪೊಲೀಸರಿಂದ ಸರ್ಪಗಾವಲು ಹಾಕಲಾಗಿದೆ.

ಹೆದ್ದಾರಿಗೆ ರೈತರು ತೆರಳಿದಂತೆ ಬ್ಯಾರಿಕೇಡ್ ಹಾಕಿ ತಡೆಯೊಡ್ಡಲಾಗಿದ್ದು, ಈ ವೇಳೆ ಪೊಲೀಸರ ಜೊತೆ ರೈತರು ವಾಗ್ವಾದ ನಡೆಸಿದ್ದಾರೆ.
ರೈತರ ಹಿತ ಕಾಪಾಡಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ತತ್ ಕ್ಷಣವೇ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆ ವೇಳೆ ರೈತರ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದು, ಪ್ರತಿಭಟನಾಕಾರರನ್ನ ಮನಸ್ಸೋ ಇಚ್ಛೆ ಎಳೆದಾಡಿದ್ದಾರೆ. ಬಲವಂತವಾಗಿ ರೈತರನ್ನು ಬಂಧಿಸಿ ಬಸ್ಸಿಗೆ ತುಂಬಿದ್ದಾರೆ.
ಕೇವಲ ಐದೇ ಐದು ನಿಮಿಷ ಹೆದ್ದಾರಿ ತಡೆಗೆ ರೈತರು ಮನವಿ ಮಾಡಿದರೂ, ಅದಕ್ಕೆ ಸ್ಪಂದಿಸದ ಪೊಲೀಸರು ರೈತರನ್ನು ಬಂಧಿಸಿದ್ದಾರೆ.
