ಹೊಸದಿಲ್ಲಿ: 6,600 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಬೆಂಗಳೂರು ಸೇರಿದಂತೆ ದೇಶಾದ್ಯಂತ 60 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೇನ್‌ಬಿಟ್‌ಕಾಯಿನ್ ಕ್ರಿಪ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿ ದಿಲ್ಲಿ, ಪುಣೆ, ಚಂಡೀಗಢ, ನಾಂದೇಡ್, ಕೊಲ್ಹಾಪುರ, ಮತ್ತು ಬೆಂಗಳೂರು ಸೇರಿದಂತೆ ಆರೋಪಿಗಳಿಗೆ ಸೇರಿದ 60 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ. ಈ ವೇಳೆ, ಕೆಲವು ಕ್ರಿಪ್ಟೋ ವಾಲೆಟ್ಸ್, ಡಿಜಿಟಲ್ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದೆ. ಜತೆಗೆ, ಇಮೇಲ್‌ಗಳು, ಕ್ಲೌಡ್‌ಗಳಲ್ಲಿ ಇರುವ ಮಾಹಿತಿಯನ್ನು ಸಿಬಿಐ ಪಡೆದುಕೊಂಡಿದೆ.
ಏನಿದು ಹಗರಣ?
ಅಮಿತ್ ಭಾರದ್ವಾಜ್ ಮತ್ತು ಅಜಯ್ ಭಾರದ್ವಾಜ್ ಎಂಬುವರು ಗೇನ್‌ಬಿಟ್‌ಕಾಯಿನ್ ಜಾಲತಾಣ ಮೂಲಕ 2015ರಲ್ಲಿ ಪ್ರತೀ ತಿಂಗಳು ಶೇ. 10ರಷ್ಟು ಲಾಭ ಮಾಡಿಕೊಡುವುದಾಗಿ ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದರು. ಆರಂಭದಲ್ಲಿ ಹೂಡಿಕೆದಾರರಿಗೆ ಲಾಭಾಂಶ ನೀಡಲಾಗುತ್ತಿತ್ತು. ಆದರೆ ಅನಂತರದ ದಿನಗಳಲ್ಲಿ ಲಾಭಾಂಶ ನೀಡಲು ಸಾಧ್ಯವಾಗದ್ದರಿಂದ ಹೂಡಿಕೆದಾರರಿಗೆ ನಷ್ಟ ಉಂಟಾಯಿತು. ದೇಶಾದ್ಯಂತ ಈ ಕಂಪೆನಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.