ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ಎಲ್ಲಾ ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮರಾ ಅಳವಡಿಸುವುದರೊಂದಿಗೆ ಗುಣಮಟ್ಟದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಜಿಲ್ಲಾ ಅಧಿಕಾರಿ ರಾಘವೇಂದ್ರ ಕರೆ ನೀಡಿದರು.
ಕುವೆಂಪುನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ನಿಲಯ ಪಾಲಕರುಗಳ ಸಭೆಯಲ್ಲಿ ಮಾತನಾಡಿದ ಅವರು ಮೈಸೂರು ಜಿಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ತವರು ಜಿಲ್ಲೆಯಾಗಿದ್ದು ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಕಾಲೇಜಿಗೆ ಹೋದಾಗ ಮತ್ತು ಬಂದಾಗ ಹಾಜರಾತಿ ಕಡ್ಡಾಯಗೊಳಿಸಬೇಕು ಹಾಗೂ ನಿಗದಿತ ಸಮಯದೊಳಗೆ ಹಾಸ್ಟೆಲ್‌ಗೆ ಬರುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು ಶುದ್ಧವಾಗಿರಬೇಕು. ಅಡುಗೆಮನೆ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸರ್ಕಾರದಿಂದ ಬರುವ ಆದೇಶಗಳನ್ನು ಪಾಲಿಸಬೇಕು ಎಂದ ಅವರು ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ಈ ಸಂದರ್ಭದಲ್ಲಿ ಮೈಸೂರು ತಾಲ್ಲೂಕು ಕಲ್ಯಾಣಾಧಿಕಾರಿ ವಿಶ್ವನಾಥ್ ಹಾಗೂ ಎಲ್ಲಾ ನಿಲಯ ಪಾಲಕರು ಹಾಜರಿದ್ದರು.