ಮೈಸೂರು : ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಇಬ್ಬರು ಪೆಡ್ಲರ್ ಗಳನ್ನ ಬಂಧಿಸಲಾಗಿದ್ದು ೨೦.೧೯ ಲಕ್ಷ ಮೌಲ್ಯದ ೫೭ ಕೆಜಿ ೭೦೦ ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಸಿಮ್ ಹಾಗೂ ನದೀಮ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಫರ್ಜು ಪರಾರಿಯಾಗಿದ್ದಾನೆ.
ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿಮ್ರಾ ಮಸೀದಿ ಬಳಿ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ತೆರಳುತ್ತಿದ್ದ ಯುವಕರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಾಗ ೧ ಕೆಜಿ ಗಾಂಜಾ ದೊರೆತಿದೆ. ಆರೋಪಿಗಳನ್ನ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಹದೇವಪುರ ಮುಖ್ಯರಸ್ತೆಯ ಕಾವೇರಿನಗರದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ೫೬ ಕೆಜಿ ೭೦೦ ಗ್ರಾಂ ಗಾಂಜಾ ದೊರೆತಿದೆ. ಮೂವರು ಆರೋಪಿಗಳ ಪೈಕಿ ಓರ್ವ ಆರೋಪಿ ತಪ್ಪಿಸಿಕೊಂಡಿದ್ದಾನೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಮಾರ್ಗದರ್ಶನ, ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಉಸ್ತುವಾರಿ, ಸಿಸಿಬಿ ನಿರೀಕ್ಷಕ ಪೂವಯ್ಯ ನೇತೃತ್ವದಲ್ಲಿ ಪಿಎಸ್ಸೈ ಗಳಾದ ಲೇಪಾಕ್ಷ, ರಾಜು ಕೋನಕೇರಿ ಹಾಗೂ ಸಿಬ್ಬಂದಿಗಳಾದ ರಾಜು, ನಾಗೇಶ್, ಸತೀಶ್, ರಾಮೇಗೌಡ, ಮಂಜುನಾಥ್, ಮಂದುಕುಮಾರ್, ಅನಿಲ್ ಪುರುಷೋತ್ತಮ್, ಅರುಣ್ ಕುಮಾರ್, ರಘು, ರಾಜು, ಮಮತ, ಶ್ರೀನಿವಾಸ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.