ಬೆಂಗಳೂರು: ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಟೋರಿಯಸ್ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಸುನೀಲ ಸೇರಿದಂತೆ ಹಲವು ಆರೋಪಿಗಳು ಕೇಂದ್ರ ಕಾರಾಗೃಹದಲ್ಲಿದ್ದು, ಜೈಲಿನಲ್ಲಿ ಕೂತು ಹೊರಗಡೆ ಇರುವ ಸಹಚರರ ಮೂಲಕ ಅಪರಾಧ ಚಟುವಟಿಕೆಗಳನ್ನ ನಿಯಂತ್ರಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ಸಿಸಿಬಿ ಅಧಿಕಾರಿಗಳು ಮೊಬೈಲ್, ವೆಪನ್, ಮಾದಕ ಪದಾರ್ಥ ಸೇರಿದಂತೆ ಹಲವು ವಸ್ತುಗಳ ಪತ್ತೆಗೆ ಶೋಧ ಕಾರ್ಯ ನಡೆಸಿದರು. ಆದರೆ, ಜೈಲಿನಲ್ಲಿ ಮೊಬೈಲ್ ಸೇರಿದಂತೆ ಯಾವುದೇ ನಿಷೇಧಿತ ವಸ್ತು ಪತ್ತೆಯಾಗಿಲ್ಲ.
ದಾಳಿ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾತನಾಡಿ, ಇದುವರೆಗೂ ಮೊಬೈಲ್ ಸೇರಿದಂತೆ ನಿಷೇಧಿತ ವಸ್ತು ಪತ್ತೆಯಾಗಿಲ್ಲ. ಜೈಲಿನ ಎಲ್ಲ ಬ್ಯಾರಕ್ಗಳನ್ನು ಸಂಪೂರ್ಣ ಶೋಧ ನಡೆಸಲಾಗಿದೆ. ಸಿಸಿಬಿ ಪೊಲೀಸರ ತಂಡ ತಲಾಶ್ ನಡೆಸುತ್ತಿದೆ. ಪರಪ್ಪನ ಅಗ್ರಹಾರ ಜೈಲಿನ ವಿಐಪಿ ಸೆಲ್ಗಳಲ್ಲೂ ಶೋಧ ನಡೆಸುತ್ತಿದ್ದಾರೆ ಎಂದು ಹೇಳಿದರು.
ಪರಪ್ಪನ ಅಗ್ರಹಾರ ಜೈಲಿನೊಳಗೆ ಗನ್, ಬುಲೆಟ್, ಗಾಂಜಾ ಪೂರೈಕೆಯಾಗುತ್ತಿದೆ ಎಂದು ನ್ಯಾಯಾಲಯದ ಮುಂದೆ ಆರೋಪ ಮಾಡಲಾಗಿತ್ತು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದ ಹೈಕೋರ್ಟ್ ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.