ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್ ತೆರೆಯುವುದು ಅಥವಾ ನಡೆಸುವುದನ್ನು ನಿಷೇಧಿಸಲು ಅವಕಾಶ ಕಲ್ಪಿಸುವ ೨೦೨೪ನೇ ಸಾಲಿನ ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ(ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ) ವಿಧೇಯಕ ಅಂಗೀಕಾರ ಆಗಿದೆ. ಈ ಮೂಲಕ ರಾಜ್ಯದಲ್ಲಿ ಹುಕ್ಕಾ ಬಾರ್ ನಡೆಸುವಂತಿಲ್ಲ. ಸದ್ಯ ಇಂದು ಬೆಂಗಳೂರಿನಲ್ಲಿ ನಿಷೇಧಿತ ಹುಕ್ಕಾ ಕೇಂದ್ರಗಳ ಮೇಲೆ ಸಿಸಿಬಿ ದಾಳಿ ನಡೆಸಿದೆ.
ಮಹಾಲಕ್ಷ್ಮೀ ಲೇಔಟ್, ಹೆಚ್‌ಎಎಲ್ ಹಾಗೂ ಕೆ.ಆರ್. ಪುರಂ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹುಕ್ಕಾ ಬಾರ್ ಗಳ ಮೇಲೆ ನಿಷೇಧ ಹೇರಿತ್ತು. ಆದರೂ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಹುಕ್ಕಾ ಬಾರ್‌ಗಳನ್ನು ನಡೆಸಲಾಗುತ್ತಿತ್ತು. ಈ ಬಗ್ಗೆ ಸೂಕ್ತ ಮಾಹಿತಿ ಆಧರಿಸಿ ನಗರ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಏಳು ಜನರನ್ನು ಬಂಧಿಸಲಾಗಿದೆ. ೧೨.೫ ಲಕ್ಷ ಮೌಲ್ಯದ ಹುಕ್ಕಾ ಫ್ಲೇವರ್ ಹಾಗೂ ಇತರೇ ವಸ್ತುಗಳನ್ನು ಸೀಜ್ ಮಾಡಲಾಗಿದೆ.
ಹುಕ್ಕಾ ಬಾರ್‌ಗಳ ಪರಿಣಾಮವನ್ನು ಅಧ್ಯಯನ ಮಾಡಿದ ಆರೋಗ್ಯ ತಜ್ಞರು ನಿಷೇಧಕ್ಕೆ ಶಿಫಾರಸು ಮಾಡಿದ್ದರು. ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಹ ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸುವುದಾಗಿ ಹೇಳಿದ್ದರು. ಇದೀಗ ಅಧಿಕೃತವಾಗಿ ಕರ್ನಾಟಕದಲ್ಲಿ ಹುಕ್ಕಾ ಉತ್ಪನ್ನ ಹಾಗೂ ಮಾರಾಟ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ COTPA ೨೦೦೩, ೨೦೧೫ ಕಾಯ್ದೆ ಅನ್ವಯ ಕ್ರಮಕೈಗೊಳ್ಳುವುದಾಗಿ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.