ಮೈಸೂರು: ಈ ಬಾರಿ ಗೌರಿ ಗಣೇಶ ಹಬ್ಬದಂದು ಪರಿಸರಕ್ಕೆ ಹಾನಿಯಾಗುವ ಯಾವುದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾದ ಗಣೇಶ ಮೂರ್ತಿಗಳನ್ನು ಬಳಸದೆ ಮಣ್ಣಿನಿಂದ ನಿರ್ಮಿತವಾದ ಪರಿಸರ ಸ್ನೇಹಿ ಗಣಪತಿಯನ್ನು ಪೂಜಿಸಿ, ಅರ್ಥಪೂರ್ಣವಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸೋಣ ಎಂದು ಮೈಸೂರು ತಾಲೂಕು ತಹಸೀಲ್ದಾರ್ ಬಿ.ಎನ್.ಗಿರೀಶ್ ತಿಳಿಸಿದರು.
ಮೈಸೂರು ತಾಲೂಕು ಕಚೇರಿಯ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬದ ಆಚರಣೆಗೆ ಸಂಬಂದಿಸಿದಂತೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಗೌರಿ ಗಣೇಶ ಹಬ್ಬದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಹಾಗೂ ಪಿಒಪಿ ಯಿಂದ ಗಣೇಶ ವಿಗ್ರಹವನ್ನು ತಯಾರಿಸದಂತೆ ಹಾಗೂ ಖರೀದಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮಣ್ಣಿನಿಂದ ಮಾತ್ರ ಗೌರಿ ಗಣೇಶ ಮೂರ್ತಿಗಳನ್ನು ತಯಾರಿಸುವಂತೆ ಹಾಗೂ ಮಣ್ಣಿನಿಂದ ಮಾಡಿದ ಗೌರಿ ಗಣೇಶ ವಿಗ್ರಹಗಳನ್ನು ಮಾತ್ರ ಸಾರ್ವಜನಿಕರು ಖರೀದಿಸಿ ಸಂಪ್ರದಾಯದoತೆ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬವನ್ನು ಆಚರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಈ ಬಾರಿ ಗೌರಿ ಗಣೇಶ ಹಬ್ಬವನ್ನು ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಹಾಗೂ ಕೆರೆಕಟ್ಟೆಯಲ್ಲಿನ ನೀರನ್ನು ಕಲುಷಿತಗೊಳಿಸದಂತೆ ಗೌರಿ ಹಬ್ಬ ಆಚರಿಸಬೇಕು. ಸಾರ್ವಜನಿಕರು ಮನೆಗಳಲ್ಲಿ ಗೌರಿ ಗಣೇಶ ಆಚರಣೆಯ ಸಂಪ್ರದಾಯ ಇದ್ದಲ್ಲಿ ಮಣ್ಣಿನಿಂದ ಮಾಡಿದ ಚಿಕ್ಕ ಚಿಕ್ಕ ವಿಗ್ರಹಗಳನ್ನು ಖರೀದಿಸಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗಿರೀಧರ್, ಗ್ರಾಮೀಣ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಮಮತಾ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.