ಮೈಸೂರು: ವಿಶ್ವಕರ್ಮ ಜಯಂತಿಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಜಿಲ್ಲಾಡಳಿತದ ವತಿಯಿಂದ ಸಮುದಾಯದ ಜೊತೆಗೂಡಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಶಿವರಾಜ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲಾಡಳಿತ ವತಿಯಿಂದ ಸೆ.೧೭ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಕಲಾಮಂದಿರದಲ್ಲಿ ಜಿಲ್ಲಾ ಶಿಷ್ಟಾಚಾರದ ಅನ್ವಯ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ಸಮುದಾಯದ ಮುಖಂಡರು ಮಾತನಾಡಿ, ಸಮುದಾಯದ ಮುಖಂಡರುಗಳು ಸಭೆ ನಡೆಸಿ, ನಂತರ ಕಾರ್ಯಕ್ರಮದಲ್ಲಿನ ಉಪನ್ಯಾಸ, ಸಂಪನ್ಮೂಲ ವ್ಯಕ್ತಿಗಳು ಹಾಗೂ ದಿವ್ಯ ಸಾನಿಧ್ಯದ ಕುರಿತು ತಿಳಿಸಲಾಗುವುದು. ಮಹಾನಗರ ಪಾಲಿಕೆ ವತಿಯಿಂದ ಶಾಮಿಯಾನ ಮತ್ತು ಉಪಹಾರ ನೀಡಲು ವ್ಯವಸ್ಥೆ ಮಾಡಿಸುವಂತೆ ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು, ಕರ್ನಾಟಕ ಕಾವಲು ಪಡೆಯ ಮೋಹನ್ ಕುಮಾರ್ ಗೌಡ, ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಸಣ್ಣಸ್ವಾಮಿ ಆನಂದೂರು, ಎಸ್.ರಾಮಚಂದ್ರ ಹೆಬ್ಬಾಳ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.