ಪಿರಿಯಾಪಟ್ಟಣ : ಗಣತಿದಾರರ ಅವೈಜ್ಞಾನಿಕ ನಿಲುವು ಮತ್ತು ದುರುದ್ದೇಶಕ್ಕೆ ಜಾತಿ ಗಣತಿಯಲ್ಲಿ
ಹೊಲೆಯ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ತಾಪಂ ಮಾಜಿ ಸದಸ್ಯ ಟಿ.ಈರಯ್ಯ ಆರೋಪಿಸಿದರು.
ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರದ ವತಿಯಿಂದ ನಡೆಯುತ್ತಿರುವ ಒಳ ಮೀಸಲಾತಿಗಾಗಿ ಜಾತಿ ಸಮೀಕ್ಷೆಯಲ್ಲಿ ಆದಿ ಕರ್ನಾಟಕ ಸಮುದಾಯ ವಾಸವಿರುವ ಗ್ರಾಮಗಳಲ್ಲಿ ಗಣತಿದಾರರು ಜಾತಿ ಕಾಲಮ್‌ನಲ್ಲಿ ಆದಿ ಕರ್ನಾಟಕ ಎಂದು ನಮೂದಿಸಿದ್ದು, ಉಪಜಾತಿ ಕಾಲಂ ನಲ್ಲಿ ಗೊತ್ತಿಲ್ಲ ಎಂದು ನಮೂದಿಸಿರುತ್ತಾರೆ. ಇದರಿಂದಾಗಿ ಹೊಲೆಯ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ಜಾತಿ ಗಣತಿಯ ಮೂಲಕ ಸರ್ಕಾರಕ್ಕೆ ಹೊಲೆಯ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸುವ ದುರುದ್ದೇಶವನ್ನು ಗಣತಿದಾರರು ಹೊಂದಿದ್ದಾರೆ. ಯಾವುದೇ ರೀತಿಯ ಗಣತಿ ಸಮೀಕ್ಷೆಯ ತರಬೇತಿಯನ್ನು ಪಡೆಯದ ವ್ಯೆಕ್ತಿಗಳ ಮೂಲಕ ಅಧಿಕಾರಿಗಳು ಸಮೀಕ್ಷೆ ಮಾಡಿಸುತ್ತಿದ್ದಾರೆ ಎಂದರು.
ಟಿಎಟಿಸಿಎಂಎಸ್ ಅಧ್ಯಕ್ಷ ಐಲಾಪುರ ರಾಮು ಮಾತನಾಡಿ ಆದಿ ಕರ್ನಾಟಕ ಹೊಲಯ ಸಮುದಾಯಕ್ಕೆ ತಿಳುವಳಿಕೆ ಮತ್ತು ಜಾಗೃತಿ ಇಲ್ಲದ ಕಾರಣ ಸಮುದಾಯದ ಮುಖಂಡರುಗಳು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಜಾತಿ ಸಮೀಕ್ಷೆಯಲ್ಲಿ ಹೊಲಯ ಎಂಬುದನ್ನು ಬರೆಸುವಂತೆ ತಿಳಿಸಿದ್ದೇವೆ.
ಪಟ್ಟಣದ ಸಮೀಪವಿರುವ ಅಂಕನಹಳ್ಳಿ ಗ್ರಾಮದಲ್ಲಿ ಸಮೀಕ್ಷೆ ಸಮಯದಲ್ಲಿ ಮಾಹಿತಿದಾರರು ಹೊಲಯ ಎಂದು ಹೇಳಿದ್ದರು ಕೂಡ ಕುಮಾರ್ ಎಂಬ ಶಿಕ್ಷಕ ಉಪ ಕಾಲಂ ನಲ್ಲಿ ಗೊತ್ತಿಲ್ಲ ಎಂದು ನಮೂದಿಸಿದ್ದಾರೆ. ದೊಡ್ಡ ಹರವೆ, ಕುಂದನಳ್ಳಿ, ಮಲ್ಲಿನಾಪುರ ಗ್ರಾಮದಲ್ಲಿ ಆದಿ ಕರ್ನಾಟಕ ಹೊಲಯ ಕುಟುಂಬಗಳಿದ್ದು ಇದರಲ್ಲಿ ಸಾಕಷ್ಟು ಕುಟುಂಬಗಳನ್ನು ಉಪಜಾತಿ ಕಾಲಮ್‌ನಲ್ಲಿ ಗೊತ್ತಿಲ್ಲ ಎಂದು ನಮೂದಿಸಿರುತ್ತಾರೆ ಹಾಗೂ ರಾವಂದೂರು ಸಮೀಪದ ಶೆಟ್ಟಯ್ಯನ ಕೊಪ್ಪಲು ಗ್ರಾಮದಲ್ಲಿ ಲಂಬಾಣಿ ಸಮುದಾಯವನ್ನು ಮಾದಿಗ ಸಮುದಾಯ ಎಂದು ನಮೂದಿಸಿರುತ್ತಾರೆ ಇಷ್ಟಲ್ಲದೆ ಬೆಟ್ಟದಪುರ, ರಾವಂದೂರು, ಕೊಣಸೂರು, ಹರದೂರು, ಪಂಚವಳ್ಳಿ ಇನ್ನೂ ಕೆಲವು ಕಡೆ ವೀರಶೈವ ಸಮುದಾಯದವರು ಜಂಗಮ ಎಂದು ನಮೂದಿಸಿರುತ್ತಾರೆ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಪರಿಶಿಷ್ಟ ಜಾತಿ ಅಲ್ಲದೆ ಇತರೆ ಸಮುದಾಯಗಳು ಕೂಡ ಮಾಡುತ್ತಿದ್ದು ಈ ವೃತ್ತಿಯನ್ನು ಮಾಡುವವರನ್ನು ಕೂಡ ಮಾದಿಗ ಎಂದು ನಮೂದಿಸುತ್ತಿದ್ದಾರೆ ಎಂದು ದೂರಿದ ಅವರು, ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ಈ ಎಲ್ಲಾ ವ್ಯತ್ಯಾಸಗಳನ್ನು ಪುನರ್ ಪರಿಶೀಲಿಸಿ ಆಗಿರುವ ವ್ಯತ್ಯಾಸವನ್ನು ಕಡ್ಡಾಯವಾಗಿ ಸರಿಪಡಿಸಿ ಹಾಗೂ ವ್ಯತ್ಯಾಸ ಮಾಡಿರುವ ಶಿಕ್ಷಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಇಲ್ಲದಿದ್ದಲ್ಲಿ ಕಚೇರಿಯ ಮುಂಭಾಗ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಮ್ಮಣ್ಣಯ್ಯ, ಚನ್ನಕಲ್ ಶೇಖರ್, ಪಿ. ಮಹದೇವ್, ರಾಜಣ್ಣ ಕರಡಿಪುರ, ಪಿ.ಪಿ. ಮಹದೇವ್, ಸೋಮಶೇಖರ್ ಆವರ್ತಿ,ಬಿ,. ಶಿವಣ್ಣ, ಗೋಪಾಲ್, ಆರ್. ಡಿ. ಮಹದೇವ್,ಜಯಣ್ಣ, ರಾಜಯ್ಯ, ಶಿವರಾಜ್, ಈರಾಜ್ ಉಪಸ್ಥಿತರಿದ್ದರು