- ವಿಶ್ವ ಹಾವು ಕಡಿತ ಜಾಗೃತಿ ದಿನಾಚರಣೆ ಕಾರ್ಯಕ್ರಮ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಭಾರತದಲ್ಲಿ ಹಾವಿನ ಕಡಿತದಿಂದ ಸಾಯುವವರ ಸಂಖ್ಯೆ ವಿಶ್ವದಲ್ಲೇ ಅಧಿಕ. ನಿರಂತರ ಜಾಗೃತಿ ನಂತರವೂ ಹಾವು ಕಡಿತವನ್ನು ಗಂಭೀರವಾಗಿ ತೆಗೆದುಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಉರಗ ತಜ್ಞ ಸ್ನೇಕ್ ಶ್ಯಾಮ್ ತಮ್ಮ ಅಭಿಪ್ರಾಯ ಹೇಳಿದರು.
ಕೆ.ಆರ್.ನಗರ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹಾವು ಕಡಿತ ಜಾಗೃತಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾವು ಕಡಿತ ಜಾಗತಿಕ ಸಮಸ್ಯೆಯಾಗಿದೆ, ಜಗತ್ತಿನ ಎಲ್ಲಾ ದೇಶಗಳಲ್ಲೂ ಬಗೆಬಗೆಯ ಹಾವುಗಳಿವೆ. ಹಾವುಗಳಲ್ಲಿದ್ದಲ್ಲಿ ಕಡಿತವೂ ಸಾಮಾನ್ಯವೇ. ಆದರೆ ಇಡೀ ವಿಶ್ವದಲ್ಲಿ ಹಾವು ಕಡಿತದ ರಾಷ್ಟ್ರ ಎಂದು ಕರೆಯುವುದು ಭಾರತವನ್ನೇ. ಏಕೆಂದರೆ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹಾವುಗಳ ಸಂಖ್ಯೆ ಅಧಿಕ. ಇದರೊಟ್ಟಿಗೆ ಜಾಗೃತಿ ಕೊರತೆಯಿಂದ ಗ್ರಾಮೀಣ ಭಾಗದಲ್ಲಿ ಹಾವು ಕಡಿತದಿಂದ ಮೃತಪಡುವವರ ಸಂಖ್ಯೆಯೂ ಏರಿಕೆಯಾಗಿದೆ. ಹಾವಿನ ಕಡಿತದಿಂದ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಕಾರಣದಿಂದಲೇ ಆರು ವರ್ಷದಿಂದ ಅಂತರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನಾಗಿ ಸೆಪ್ಟಂಬರ್ 19ರಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಹಾವಿನ ಕಡಿತದ ಕುರಿತಾಗಿಯೇ ಜಾಗೃತಿ ಮೂಡಿಸಲಾಗುತ್ತಿದೆ.
ಯಾವ ಹಾವು ಅಪಾಯಕಾರಿ : ಭಾರತದಲ್ಲಿ 300 ವಿಧದ ಹಾವುಗಳಿದ್ದು, ಅವುಗಳೆಲ್ಲವೂ ಅಪಾಯಕಾರಿಯಲ್ಲ ಎನ್ನಲಾಗಿದೆ. ದೇಶದಲ್ಲಿ ಹಾವು ಕಡಿತದಿಂದ ಮೃತಪಡುವವರಲ್ಲಿ ಶೇ90 ಗೂ ಅಧಿಕ ಜನರು, ನಮ್ಮಲ್ಲಿನ ಕೇವಲ 4 ಜಾತಿಯ ಹಾವುಗಳ ಕಡಿತದಿಂದ ಮಾತ್ರ ಸಾವನ್ನಪ್ಪುತ್ತಾರೆ. ಹೀಗಾಗಿ ಆ ನಾಲ್ಕು ವಿಷಕಾರಿ ಹಾವುಗಳನ್ನು ಭಾರತದ ದೊಡ್ಡ ವಿಷಕಾರಿ ಹಾವುಗಳು ಎಂದು ಪರಿಗಣಿಸಲಾಗಿದೆ ನಾಗರಹಾವು, ಕೊಳಕು ಮಂಡಲ, ಕಟ್ಟುಹಾವು, ಉರಿ ಮಂಡಲ ಹೆಚ್ಚು ಅಪಾಯಕಾರಿ ಹಾವುಗಳು. ಈ ಹಾವುಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಜನವಸತಿ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ ಹಾಗೂ ಇವುಗಳ ಕಡಿತದಿಂದಲೇ ಗರಿಷ್ಠ ಸಂಖ್ಯೆಯ ಜನ ಸಾವನಪ್ಪುತ್ತಿದ್ದಾರೆ. ಆದ ಕಾರಣ ನಾವು ಈ ನಾಲ್ಕು ಹಾವುಗಳ ಚಲನ ವಲನ, ಆಹಾರ ಪದ್ದತಿ ಇತ್ಯಾದಿ ವಿಷಯಗಳ ಬಗ್ಗೆ, ಮತ್ತೆ ಅವುಗಳ ಕಡಿತದಿಂದ ಪಾರಾಗಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿತರೆ ಹಾವುಗಳ ಕಡಿತದಿಂದ ಸುಲಭವಾಗಿ ಪಾರಾಗಬಹುದು ಎಂದರು.
ಮುನ್ನೆಚ್ಚರಿಕೆ ಕ್ರಮಗಳು ಹೀಗಿರಲಿದೆ ರೈತರು ದೇಶದ ಬೆನ್ನೆಲುಬು ಆದ್ದರಿಂದ ಹಾವು ಕಡಿತದಿಂದ ಸಾಕಷ್ಟು ರೈತರು, ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ, ಇನ್ನಾದರೂ ಎಚ್ಷೆತ್ತು ರೈತರು ರಾತ್ರಿ ವೇಳೆ ಜಮೀನು ಪ್ರದೇಶಕ್ಕೆ ಹೋದಾಗ ಕಡ್ಡಾಯವಾಗಿ ಚಾರ್ಚ್ ಬಳಸುವುದು. ಸಾಧ್ಯವಾದರೇ ಶೂಗಳನ್ನು ಬಳಸುವುದು ಸೂಕ್ತ,ಕಳೆ, ಹುಲ್ಲುಗಾವಲು, ಅರಣ್ಯ ಪ್ರದೇಶ, ಜಮೀನಿನಲ್ಲಿ ಕೆಲಸ ಮಾಡುವಾಗ ಗಮ್ ಬೂಟ್ ಬಳಸುವುದು ಸೂಕ್ತ ಎಂದು ಸಲಹೆ ನೀಡಿದ ಅವರು ಹಾವು ಕಚ್ಚಿದಾಗ ಮಂತ್ರ ತಂತ್ರದ ಮೊರೆ ಹೋಗದೆ, ಹತ್ತಿರದ ಆಸ್ವತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರೆ ಹಾವು ಕಚ್ಚಿದವರು ಬದುಕುಳಿಯುತ್ತಾರೆ ಎಂದರು.
ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಹಾವು ಕಡಿತದಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಸುಮಾರು 1. 40 ಲಕ್ಷ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಭಾರತದಲ್ಲೇ ಪ್ರತಿ ವರ್ಷ 50,000 ಕ್ಕೂ ಹೆಚ್ಚು ಜನರು ಹಾವು ಕಡಿತದಿಂದ ಸಾಯುತ್ತಿದ್ದಾರೆ, ಭಾರತವು ಹಾವು ಕಡಿತದಿಂದ ಸಾವಿನ ಜಾಗತಿಕ ರಾಜಧಾನಿ ಎಂದೇ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.
ಈ ಕಾರಣದಿಂದಲೇ 2018ರಲ್ಲಿ ಮೊದಲ ಅಂತಾರಾಷ್ಟ್ರೀಯ ಹಾವು ಕಡಿತದ ಜಾಗೃತಿ ದಿನವನ್ನು ಆಚರಿಸಲಾಯಿತು. ಹಾವು ಕಡಿತದ ಬಗ್ಗೆ ಜಾಗೃತಿ ಮೂಡಿಸಲು ಹಲವು ಸಂಸ್ಥೆಗಳು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಭಾರತದ ಹಲವು ರಾಜ್ಯಗಳಲ್ಲಿ ಸಂಘ ಸಂಸ್ಥೆಗಳೂ ಚಟುವಟಿಕೆ ರೂಪಿಸುತ್ತವೆ.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದ ಗ್ರಾಮ ಸಭೆಯಲ್ಲಿ ನಮ್ಮ ಆರೋಗ್ಯ ಇಲಾಖೆಯ ಸಹಾಯಕರು, ಆಶಾ ಕಾರ್ಯಕರ್ತೆಯರು ಸಂಕ್ಷಿಪ್ತವಾಗಿ ಮಾಹಿತಿ ನೀಡಿ ರೈತರು ಹಾಗೂ ಕೂಲಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಹಾವು ಕಡಿತಗೊಳಿಗಾದವರಿಗಾಗಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಐದು ಕೊಠಡಿಗಳನ್ಙು ಮೀಸಲಿಡಿ ಎಂದು ಸರ್ಕಾರಕ್ಕೆ ಮತ್ತು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೇನೆ . ಯಾವುದು ಈಡೇರಿಲ್ಲ, ಹಾವು ಕಡಿತದಿಂದ ಸಾವನ್ನಪ್ಪುವುದನ್ನು ತಪ್ಪಿಸಲು ಔಷಧಿ ಜೊತೆಗೆ ವೈದ್ಯರಿಗೆ ಸೂಕ್ತ ತರಬೇತಿ ಬೇಕಾಗಿದೆ.
ಕರ್ನಾಟಕ ರಾಜ್ಯ ರೈತ ಪರ್ವ ಸಂಘದ ಗೌರವಾಧ್ಯಕ್ಷ ಜೆ.ಎಂ.ಕುಮಾರ್, ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮ್ ಪ್ರಸಾದ್ ಮಾತನಾಡಿದರು.
ತಾಲೂಕು ಸರ್ವೋದಯ ಪಕ್ಷದ ಅಧ್ಯಕ್ಷ ಗರುಡಗಂಭ ಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಆರೋಗ್ಯ ಸಂರಕ್ಷಣಾಧಿಕಾರಿ, ಪಾರ್ವತಿ, ಆರೋಗ್ಯ ಇಲಾಕೆಯ ರೇಖಾ,ಹೇಮೇಶ್, ಡಿಸೋಜ, ಹೇಮಲತ ,ಸುಮಾ, ಸಚಿನ್ ಕುಪ್ಪೆ ಸೇರಿದಂತೆ ನೂರಾರು ಆರೋಗ್ಯ ಇಲಾಖೆಯವರು ಭಾಗವಹಿಸಿದ್ದರು.