ನವದೆಹಲಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೆ ಸಾಲ ಒದಗಿಸುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಈ ಯೋಜನೆಗಾಗಿ 2024ರಿಂದ 2031ರವರೆಗೆ 3600 ಕೋಟಿ ರೂ. ಹಣ ಮೀಸಲಿಡಲಾಗಿದೆ.
ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಹಣದ ಕೊರತೆಯಾಗಬಾರದು ಎನ್ನುವ ಕಾರಣಕ್ಕೆ ಈ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ವಾರ್ತಾ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಹೊಸ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನ ಇಲ್ಲದೆ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಇದು ಬಡ್ಡಿರಹಿತ ಸಾಲವಾಗಿದ್ದು, ಇದರೊಂದಿಗೆ ವಿದ್ಯಾರ್ಥಿಗಳ ಬೋಧನಾ ಶುಲ್ಕ ಸೇರಿದಂತೆ ಅವರು ಆಯ್ಕೆ ಮಾಡಿಕೊಂಡ ಕೋರ್ಸ್‌ಗಳಿಗೆ ವ್ಯಯಿಸುವ ಇತರ ಖರ್ಚನ್ನು ಭರಿಸಲಾಗುತ್ತದೆ.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನಲ್ಲಿ ರ್‍ಯಾಂಕ್ ಪಡೆದಿರುವ 100 ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರುವ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದು. ಅಲ್ಲದೇ ಪ್ರತಿವರ್ಷ ಈ ಯೋಜನೆಯನ್ನು ಅಪ್‌ಡೇಟ್ ಮಾಡಲಾಗುವುದು. ಸುಮಾರು 7 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ನೆರವು ನೀಡಲು ಯೋಜಿಸಲಾಗಿದೆ.
ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ಸಾಲ, ಪಿಎಂ ವಿದ್ಯಾವಿದ್ಯಾಲಕ್ಷ್ಮೀಗೆ 3600 ಕೋಟಿ ರೂ. ಮೀಸಲು, ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ನೆರವು ಘೋಷಣೆ, ಕುಟುಂಬದ ಆದಾಯ 8 ಲಕ್ಷ ಇದ್ದರೆ 3% ಬಡ್ಡಿ ಸಬ್ಸಿಡಿ, ಕುಟುಂಬದ ಆದಾಯ 4.5 ಲಕ್ಷ ಇದ್ದರೆ 100% ವಿನಾಯ್ತಿ ಇವುಗಳು ಪಿಎಂ ವಿದ್ಯಾಲಕ್ಷ್ಮೀ ಯೋಜನೆಯ ವಿಶೇಷತೆಗಳಾಗಿವೆ.