ಕೇಂದ್ರ ಸರ್ಕಾರದ ಬಜೆಟ್ ಜನ ವಿರೋಧಿ, ನಿರಾಶಾದಾಯಕ ಬಜೆಟ್
ಬೆಂಗಳೂರು: ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಕೊಡುಗೆ ಕೊಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೂ ಕೊಟ್ಟಿಲ್ಲ, ಕೊಟ್ಟಿರುವುದು ಬರಿ ಚೊಂಬು ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ಬಿಹಾರ ರಾಜ್ಯಗಳಿಗೆ ಮಾತ್ರ ವಿಶೇಷ ಅನುದಾನ ಕೊಟ್ಟಿದ್ದಾರೆ. ಅವರ ಪ್ರಧಾನಮಂತ್ರಿ ಸ್ಥಾನ ಉಳಿಯಬೇಕು ಅಂದ್ರೆ ಆ ಎರಡು ರಾಜ್ಯಗಳು ಬೇಕು. ಅದಕ್ಕೆ ಅವರಿಗೆ ಕೊಟ್ಟಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ. ನಿರ್ಮಲಾ ಸೀತಾರಾಮನ್ 48.21 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ 14.01 ಲಕ್ಷ ಕೋಟಿ ರೂ. ಅಷ್ಟು ಸಾಲ ತೆಗೆದುಕೊಳ್ತಿದ್ದಾರೆ. ಕರ್ನಾಟಕಕ್ಕೆ ನಿರಾಸೆಯಾಗಿದೆ. ರಾಜ್ಯದ ಜನರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್‌ಗೆ, ಜಲಮೂಲ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅವರೇ ಘೋಷಣೆ ಮಾಡಿದ್ದ ಹಣ ಕೊಟ್ಟಿಲ್ಲ. ಒಟ್ಟಾರೆಯಾಗಿ ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಚೊಂಬು ಕೊಟ್ಟಿದ್ದಾರೆ ಅಂತ ಕಿಡಿಕಾರಿದ್ದಾರೆ.
ರೈತರಿಗೂ ಅನ್ಯಾಯ:
ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಮಾಡಬೇಕು ಅಂತ ರೈತರು ಬೇಡಿಕೆ ಇಟ್ಟಿದ್ದರು. ಅದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಬಗ್ಗೆ ಬಹಳ ಮಾತಾಡ್ತಾರೆ ಇವರು. ಆದ್ರೆ ಸಮಾಜ ಕಲ್ಯಾಣ ಇಲಾಖೆಗೆ ಅನುದಾನ ಕಡಿಮೆ ಮಾಡಿದ್ದಾರೆ. ಮಧ್ಯಂತರ ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 9,409 ಕೋಟಿ ಕೊಟ್ಟಿದ್ರೆ, ಈಗ 6,770 ಕೋಟಿ ಮಾತ್ರ ಕೊಟ್ಟಿದ್ದಾರೆ. ಕರ್ನಾಟಕದ ಐವರು ಮಂತ್ರಿಗಳಿದ್ದರೂ ಏನೂ ಮಾಡಿಲ್ಲ, ಏನೂ ಕೊಟ್ಟಿಲ್ಲ. ಒಟ್ಟಾರೆಯಾಗಿಬಜೆಟ್ ರೈತರಿಗೆ ಪಂಗನಾಮ ಹಾಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಯಚೂರು ಏಮ್ಸ್ ಬೇಡಿಕೆ ಬಹಳ ವರ್ಷಗಳಿಂದ ಇದೆ, ಅದನ್ನೂ ಕೂಡ ಕೊಡಲಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಬಜೆಟ್‌ಜನ ವಿರೋಧಿ, ನಿರಾಶಾದಾಯಕ ಬಜೆಟ್. ಬಡವರು, ರೈತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅನ್ಯಾಯ ಆಗಿದೆ ಅಂತಾ ಟೀಕಿಸಿದ್ದಾರೆ.