ಅಲಂಕಾರು(ಕಡಬ ತಾಲೂಕು): ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಲಾಸ್ ಆನ್ ವ್ಹೀಲ್ಸ್ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಕಲಿಕೆಯ ಪ್ರಮಾಣಪತ್ರ ವಿತರಣೆ ಮತ್ತು ಕಂಪ್ಯೂಟರ್ ಹಸ್ತಾಂತರ ಕಾರ್ಯಕ್ರಮ ಅಲಂಕಾರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಖಾಸಗಿ ಶಾಲೆಗಳಂತೆ ಕಂಪ್ಯೂಟರ್ ಪ್ರಯೋಗಾಲಯ ಸ್ಥಾಪಿಸಿ ಶಿಕ್ಷಣ ಕೊಡುವುದು ಕಷ್ಟ ಎಂಬುದನ್ನರಿತು ಬಸ್‌ನಲ್ಲಿ ಗ್ರಾಮೀಣ ಸರಕಾರಿ ಶಾಲೆಯ ಅಂಗಳಕ್ಕೆ ಬಂದು ಪ್ರಾಥಮಿಕ ಕಂಪ್ಯೂಟರ್ ಶಿಕ್ಷಣ ನೀಡುವ ಈ ಯೋಜನೆ ಮಾದರಿ ಹಾಗೂ ಅತ್ಯಂತ ವಿಶಿಷ್ಟ ಎಂದರು.
ಶಾಲೆಯಲ್ಲಿ ಶಿಕ್ಷಣ ಕಲಿತು ಹೋದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಋಣ ಇರುತ್ತದೆ. ತಾನು ಕಲಿತ ಶಾಲೆಗೆ ಕಂಪ್ಯೂಟರ್ ನೀಡುವ ಮೂಲಕ ಸುಜಾಹ್ ಮೊಹಮ್ಮದ್ ಅನುಕರಣೀಯ ಕಾರ್ಯ ಮಾಡಿದ್ದಾರೆ. ಇಂತಹ ಮನೋಭಾವ ಎಲ್ಲರಿಗೂ ಬಂದರೆ, ಊರ ಶಾಲೆಗಳು ಉದ್ಧಾರ ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಅವರು ಶ್ಲಾಘಿಸಿದರು.
ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುಜಾಹ್ ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಎಂ.ಫ್ರೆಂಡ್ಸ್ ಅನಿವಾಸಿ ಭಾರತೀಯ ಟ್ರಸ್ಟಿ ನವಾಝ್ ಕೆ. ದುಬಾಯಿ, ಎಸ್‌ಡಿಎಂಸಿ ಅಧ್ಯಕ್ಷ ಎ.ಬಿ. ಸುಂದರ, ಉಪಾಧ್ಯಕ್ಷೆ ಪ್ರಮೀಳಾ, ಮಾತೃ ಸಂಘದ ಅಧ್ಯಕ್ಷೆ ಶೈಲ ಪ್ರಭಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಉಪಸ್ಥಿತರಿದ್ದರು.
ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ಹಳೆ ವಿದ್ಯಾರ್ಥಿ ಸುಜಾಹ್ ಮೊಹಮ್ಮದ್, ಎಂಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ, ಕಂಪ್ಯೂಟರ್ ಬಸ್ಸಿನ ಶಿಕ್ಷಕರಾದ ಚೈತ್ರಾ ಎ.ಎಚ್., ಶಮಾ ಸಾನಿಹಾ, ಚಾಲಕ ಅಬೂಬಕರ್ ಬಿ., ಸಂಯೋಜಕ ಮೊಹಮ್ಮದ್ ಸಫ್ವಾನ್ ಅವರನ್ನು ಸನ್ಮಾನಿಸಲಾಯಿತು.
ಕಂಪ್ಯೂಟರ್ ಶಿಕ್ಷಣ ಪಡೆದ ಬಗ್ಗೆ ಶಿಕ್ಷಕಿ ಮಲ್ಲಿಕಾ, ವಿದ್ಯಾರ್ಥಿಗಳಾದ ಆಕಾಶ್, ಮಿಸ್ಬಾ ಫಾತಿಮಾ, ದೀಕ್ಷಿತ್, ಚರಣ್ ಅನಿಸಿಕೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕ
ರಾಘವೇಂದ್ರ ಪ್ರಸಾದ್ ಎ. ಸ್ವಾಗತಿಸಿದರು. ಎಂಫ್ರೆಂಡ್ಸ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಭಾಗೀರತಿ ವಂದಿಸಿದರು. ಸಹಶಿಕ್ಷಕ ಚೆನ್ನಪ್ಪ ಕಾರ್ಯಕ್ರಮ ನಿರೂಪಿಸಿದರು.
ಎಂಫ್ರೆಂಡ್ಸ್‌ನ ಅನಿವಾಸಿ ಭಾರತೀಯ ಟ್ರಸ್ಟಿ ಹನೀಫ್ ಪುತ್ತೂರು ಅವರ ಕನಸಿನ ಯೋಜನೆ ಕಂಪ್ಯೂಟರ್ ಬಸ್. ಬಜ್ಪೆಗುತ್ತು ಹಾಜಿ ಶೇಕುಂಞಿ ಸ್ಮರಣಾರ್ಥ ಝಕರಿಯಾ ಜೋಕಟ್ಟೆ ನಿರ್ವಹಣಾ ವೆಚ್ಚ ಭರಿಸುತ್ತಿದ್ದು, ಇಷ್ಟರ ತನಕ ಪುತ್ತೂರು ತಾಲೂಕಿನ 65 ಸರಕಾರಿ ಪ್ರಾಥಮಿಕ ಶಾಲೆಗಳ 4700 ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ಮೂಲ ಶಿಕ್ಷಣ ನೀಡಲಾಗಿದೆ.



