ಬೆಂಗಳೂರು : ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಿದ್ದು, ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಫೆ.27ರವರೆಗೆ ವಿಸ್ತರಿಸಲಾಗಿದೆ.
ಈ ಸಂಬಂಧ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಪ್ರಕಟನೆ ಹೊರಡಿಸಿದ್ದು, ಇದು ಕೊನೆಯ ಅವಕಾಶವಾಗಿದ್ದು, ಈ ಅವಧಿ ನಂತರ ಪುನಃ ದಿನಾಂಕ ವಿಸ್ತರಣೆ ಇರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ.
ಇದುವರೆಗೂ 3 ಲಕ್ಷಕ್ಕೂ ಹೆಚ್ಚಿನ ಮಂದಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದು, ಕೊನೆಯ ಅವಕಾಶವಾಗಿ ಅರ್ಜಿ ಸಲ್ಲಿಸಲು ಫೆ.27 ಹಾಗೂ ಶುಲ್ಕ ಪಾವತಿಗೆ ಮಾ.3ರವರೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿರುವವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಸ್ಯಾಟ್ಸ್ ಮೂಲಕ ಆನ್‍ಲೈನ್ ನಲ್ಲಿ ಆಗಿದೆ. ಕಾಲೇಜು ಹಂತದಲ್ಲಿ 1.08 ಲಕ್ಷ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.



