ಚಾಮರಾಜನಗರ : ಸಹಕಾರ ತತ್ವದಡಿಯಲ್ಲಿ ಪರಸ್ಪರ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಸಂಘದ ಸದಸ್ಯರು ಸಲವತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಹಿರಿಯ ಲೆಕ್ಕ ಪರಿಶೋಧಕ ವಿ. ಶೈಲೇಂದ್ರ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಚಾಮರಾಜನಗರ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ಐದನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಪತ್ರಕರ್ತರಾದ ತಾವುಗಳು ಸಮಾಜದ ಮುಖ್ಯವಾಹಿನಿಯಲ್ಲಿದ್ದು, ಅಭಿವೃದ್ದಿಗಾಗಿ ದುಡಿಯುವವರು. ಸಹಕಾರಿ ವ್ಯವಸ್ಥೆಯಲ್ಲಿ ಸಂಘ ರಚನೆ ಮಾಡಿಕೊಂಡು ಬೈಲಾ ಪ್ರಕಾರ ನಿವೇಶನಗಳನ್ನು ಪಡೆದುಕೊಳ್ಳುವ ಜೊತೆಗೆ ಎಲ್ಲಾ ರೀತಿಯ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಹೋಗುವ ಮೂಲಕ ಉತ್ತಮ ಸಹಕಾರ ಸಂಘವಾಗಿದೆ.
ಕಳೆದ ಐದು ವರ್ಷಗಳ ಲೆಕ್ಕ ಪತ್ರಗಳು ಹಾಗು ಸಂಘದ ಕಾರ್ಯಚಟುವಟಿಕೆಗಳು ತೃಪ್ತಿದಾಯಕವಾಗಿದೆ. ಜಿಲ್ಲೆಯ ಹಲವು ಪತ್ರಕರ್ತರು ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಪ್ರಮಾಣಿಕವಾಗಿ ಜಿಲ್ಲಾಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ನೆರೆಯ ಜಿಲ್ಲೆಗಳಲ್ಲಿ ಪತ್ರಕರ್ತರಿಗೆ ಸರ್ಕಾರ ನಿವೇಶನ ನೀಡಿರುವ ರೀತಿಯಲ್ಲಿ ನಮ್ಮ ಜಿಲ್ಲೆಯ ಪತ್ರಕರ್ತರಿಗೂ ನಿವೇಶನ ನೀಡಲಿ. ಈ ನಿಟ್ಟಿನಲ್ಲಿ ಚಾಮರಾಜನಗರ ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘ ಉತ್ತಮ ರೀತಿಯಲ್ಲಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸ್ಧಾಪನೆಯಾಗಿ ೨೫ ವರ್ಷ ಪೂರೈಸಿದ್ದು, ಇದರಡಿಯಲ್ಲಿ ಚಾಮರಾಜನಗರ ಗೃಹ ನಿರ್ಮಾಣ ಸಹಕಾರ ಸಂಘ ಸ್ಧಾಪನೆ ಮಾಡುವ ಮೂಲಕ ಜಿಲ್ಲಾ ಕೇಂದ್ರದ ಪತ್ರಕರ್ತರಿಗೆ ನಿವೇಶನ ಒದಗಿಸುವ ಗುರಿ ಹೊಂದಲಾಗಿದೆ.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಪತ್ರಕರ್ತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕಳೆದ ಐದು ವರ್ಷಗಳಿಂದ ನಿರಂತರ ಪ್ರಕ್ರಿಯೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳು ಸಹಕಾರ ನೀಡಲು ಮುಂದಾಗಿದ್ದಾರೆ. ಈಗಾಗಲೇ ಜಮೀನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಅಮಚವಾಡಿ ರಾಜೇಂದ್ರ, ನಿರ್ದೇಶಕರಾದ ಎಂ.ಇ. ಮಂಜುನಾಥ್, ಗೂಳೀಪುರ ನಂದೀಶ್, ಗೌಡಹಳ್ಳಿ ಮಹೇಶ್, ಲಕ್ಕೂರ್ ಪ್ರಸಾದ್, ವಿ.ಗಂಗಾಧರ, ಎನ್. ರವಿಚಂದ್ರ ಹಾಗೂ ಸದಸ್ಯರು ಇದ್ದರು.