ಚಾಮರಾಜನಗರ: ಆದಿ ಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ರವರ ಆರೋಗ್ಯ, ಶೈಕ್ಷಣಿಕ, ಪರಿಸರ ಸಂರಕ್ಷಣೆ, ಆಧ್ಯಾತ್ಮಿಕ ಕಾರ್ಯಗಳು ಶಾಶ್ವತವಾದದ್ದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿಗೌಡ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅಖಿಲ ಭಾರತ ಕನ್ನಡ ಮಹಾಸಭಾ ಹಮ್ಮಿಕೊಂಡಿದ್ದ ಆದಿಚುಂಚನಗಿರಿ ಬಾಲಗಂಗಾಧರ ಸ್ವಾಮೀಜಿಯವರ ಸ್ಮರಣೆಯ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಆದಿಚುಂಚನಗಿರಿ ಮಠದ ಕಾರ್ಯಗಳು ಸಮಾಜದ ಸರ್ವರಿಗೂ ಸಮ. ಯಾವುದೇ ಜಾತಿ ಮತ ಪಂಥ ಭೇದವಿಲ್ಲದೆ ಸರ್ವರನ್ನು ಏಕತೆಯ ಭಾವನೆಯಲ್ಲಿ ಕೊಂಡಯುವ ಮಠವಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದವರು ಭಾಗಿಯಾಗಿ ಗೌರವ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭಾರತದ ವೈಶಿಷ್ಟವೇ ಗುರು ಪರಂಪರೆಯ ದಿವ್ಯ ಮಾರ್ಗದರ್ಶನವಾಗಿದೆ. ಸಾವಿರಾರು ವರ್ಷಗಳ ನಿರಂತರ ಧಾಳಿಗಳಿಂದ ಸಂರಕ್ಷಣೆ ಹಾಗೂ ಉಳಿವಿಗೆ ಕಾರಣರಾಗಿರುವುದು ಮಠಗಳು , ದಾರ್ಶನಿಕರು, ಚಿಂತಕರು , ದೇವಾಲಯಗಳು ಕಾರಣವಾಗಿವೆ. ಬಾಲಗಂಗಾಧರ ಸ್ವಾಮೀಜಿಯವರು ಆದಿಚುಂಚನಗಿರಿ ಮಠವನ್ನು ವಿಶ್ವವಿಖ್ಯಾತ ಗೊಳಿಸಿದವರು. ಅವರ ಶಿಕ್ಷಣ, ಆರೋಗ್ಯ ,ಪ್ರಕೃತಿ, ಧರ್ಮ, ಸಂಸ್ಕೃತ ಭಾಷೆ ಉಳಿವು ಹಾಗೂ ಸಮನ್ವಯ ಸಮಭಾವ ತತ್ವಗಳು ಸಮಾಜಕ್ಕೆ ಶಾಶ್ವತವಾದ ಕೊಡುಗೆಯಾಗಿದೆ. ಮಹಾತ್ಮರನ್ನು ಗುರು ಪರಂಪರೆಯನ್ನು ಗೌರವಿಸುವ ಮೂಲಕ ಮಾನವ ತನ್ನೊಳಗಿನ ಅಹಂಕಾರ ,ದರ್ಪ, ಅಜ್ಞಾನವನ್ನು ಬಿಟ್ಟು ಸುಜ್ಞಾನದ ಹಾದಿಯಲ್ಲಿ ಬೆಳೆಯಬಹುದು. ಗುರುಗಳ ಸ್ಮರಣೆಗೆ ಮಾನವನಲ್ಲಿ ನವ ಚೈತನ್ಯವನ್ನು, ಶಕ್ತಿಯನ್ನು ಮತ್ತು ಸಮಾಜಕ್ಕೆ ಅರ್ಪಣೆ ಮಾಡಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಭಾರತದ ಸಂಸ್ಕೃತಿ ಪರಂಪರೆಯ ಉಳಿವಿಗೆ ಮಠಗಳು ಅಪಾರ ಕೊಡುಗೆ ನೀಡಿವೆ. ಧರ್ಮನಿಷ್ಠೆ ,ಸ್ವಾಮೀಜಿಯವರ ತತ್ವ, ಆದರ್ಶಗಳ ನಿಷ್ಠೆ, ಮನುಷ್ಯನಲ್ಲಿ ಭಾರತದ ಸನಾತನ ಧರ್ಮ ಉಳಿಯಲು ಕಾರಣವಾಗಿದೆ ಎಂದು ತಿಳಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.

ಪ್ರಾಸ್ತಾಪಿಕವಾಗಿ ಮಾತನಾಡಿದ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಅಧ್ಯಕ್ಷ ಶ್ರೀನಿವಾಸ್ ಗೌಡ ಮಾತನಾಡಿ ಆದಿಚುಂಚನಗಿರಿ ಮಠ ಇಂದು ಬೃಹದಾಕಾರವಾಗಿ ಬೆಳೆದಿದೆ. ಧರ್ಮ, ಸಂಸ್ಕೃತಿ, ನಾಡು ,ನುಡಿ ಜಲ, ಭಾಷೆ ,ಪ್ರಕೃತಿ ಸಂಸ್ಕೃತಿಯ ಬೆಳವಣಿಗೆಗೆ ಸದಾ ಕಾಲ ಮಾರ್ಗದರ್ಶನ ನೀಡಿ ಸಮಾಜವನ್ನು ಸನ್ಮಾರ್ಗದಲ್ಲಿ ಹಾಗೂ ಭಕ್ತರಿಗೆ ಸದಾ ಕಾಲ ಪ್ರೇರಣೆಯನ್ನು ನೀಡುತ್ತಿದೆ. ಸಮಾಜಮುಖಿ ಕಾರ್ಯ ಮಾಡಲು ಗುರು ಪರಂಪರೆಯ ಮಾರ್ಗದರ್ಶನ ಆಶೀರ್ವಾದ ಸದಾ ಮುಖ್ಯವಾಗಿದೆ. ಗುರುಗಳ ಕೊಡುಗೆಯ ಬಗ್ಗೆ ವಿಶೇಷವಾಗಿ ನಾವೆಲ್ಲರೂ ಗೌರವಿಸಬೇಕು. ಚಾಮರಾಜನಗರದಲ್ಲಿ ಎಲ್ಲಾ ಮತ ಧರ್ಮದ ಜನರು ಭಾಗಿಯಾಗಿ ಗೌರವ ಸಲ್ಲಿಸಿರುವುದೇ ಸ್ವಾಮೀಜಿ ಅವರ ವ್ಯಕ್ತಿತ್ವ ಹಾಗೂ ಪ್ರಭಾವವನ್ನು ತಿಳಿಸುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಮಚಂದ್ರ ಮಾತನಾಡಿ ಆದಿಚುಂಚನಗಿರಿ ಮಠ ಮಂಡ್ಯ ಜಿಲ್ಲೆಯಲ್ಲಿ ತನ್ನ ಕೇಂದ್ರವಾಗಿಟ್ಟುಕೊಂಡು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ರೂಪಿಸಿ ಸಮಾಜವನ್ನು ಸದೃಢವಾಗಿ ನಿರ್ಮಿಸುತ್ತಿದೆ. ಆದಿಚುಂಚನಗಿರಿ ಮಠದ ಸಂಪೂರ್ಣ ಬೆಳವಣಿಗೆಗೆ ಬಾಲಗಂಗಾಧರ ಸ್ವಾಮೀಜಿಯವರ ಕೊಡುಗೆ ಮತ್ತು ಮಾರ್ಗದರ್ಶನ ಅಪಾರವಾಗಿದೆ ಎಂದು ಭಕ್ತರು ಸದಾ ಕಾಲ ನಿಷ್ಠೆಯಿಂದ ಇದ್ದಾರೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಾಜಿ ನಗರಸಭಾ ಸದಸ್ಯ ಗಣೇಶ್ ದೀಕ್ಷಿತ್, ಕನ್ನಡ ಸಂಘಟನೆಯ ರಾಜೇಂದ್ರ ,ಜಿಲ್ಲಾ ಉಪ್ಪಾರ ಯುವಕ ಸಂಘದ ಜೈ ಕುಮಾರ್, ಲೋಕನಾಥ್, ಶ್ರೀನಿಧಿ ಕುದರ್, ನಿಜಧ್ವನಿ ಗೋವಿಂದರಾಜು, ದ್ವಾರಕೀಶ್ , ತಾಂಡವಮೂರ್ತಿ, ರವಿಚಂದ್ರಪ್ರಸಾದ್, ಶಿವು, ಪದ್ಮ ಪುರುಷೋತ್ತಮ್, ಮುಂತಾದವರು ಉಪಸ್ಥಿತರಿದ್ದರು.