Sunday, July 13, 2025
Google search engine

Homeಕಾಡು-ಮೇಡುಚಾಮರಾಜನಗರ: ಕಾರ್ಬೋಫುರಾನ್ ಕೀಟನಾಶಕದಿಂದ ಮಲೆ ಮಹದೇಶ್ವರದಲ್ಲಿ ಐದು ಹುಲಿಗಳ ಸಾವು ದೃಢ-ಸಿಸಿಎಫ್ ಹೀರಾಲಾಲ್

ಚಾಮರಾಜನಗರ: ಕಾರ್ಬೋಫುರಾನ್ ಕೀಟನಾಶಕದಿಂದ ಮಲೆ ಮಹದೇಶ್ವರದಲ್ಲಿ ಐದು ಹುಲಿಗಳ ಸಾವು ದೃಢ-ಸಿಸಿಎಫ್ ಹೀರಾಲಾಲ್

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ 5 ಹುಲಿಗಳ ಹತ್ಯಾಕಾಂಡ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹುಲಿ ಹಾಗೂ ಹಸುವಿನ ಅಂಗಾಂಗವನ್ನು ಲ್ಯಾಬ್‌ಗೆ ಕಳುಹಿಸಿದ್ದ ರಿಪೋರ್ಟ್ ಇದೀಗ ಬಂದಿದ್ದು, ವರದಿಯಲ್ಲಿ ಹುಲಿಗಳ ಸಾವಿಗೆ ಕಾರ್ಬೋಫುರಾನ್ ಕೀಟನಾಶಕ ಬಳಕೆಯಾಗಿರುವುದು ದೃಢಪಟ್ಟಿದೆ ಎಂದು ಸಿಸಿಎಫ್ ಹೀರಾಲಾಲ್ ತಿಳಿಸಿದ್ದಾರೆ.

ಹಸುವನ್ನು ಕಳೆದುಕೊಂಡ ದನಗಾಹಿಗಳು ಹಸುವಿಗೆ ಕಾರ್ಬೋಫುರಾನ್ ಎಂಬ ಕೀಟನಾಶಕ ಸಿಂಪಡಿಸಿದ್ದರು. ಇದನ್ನು ತಿಂದ 5 ಹುಲಿಗಳು ಹಸುವಿನ ಅಕ್ಕಪಕ್ಕದ ಸ್ಥಳದಲ್ಲೇ ಸಾವನ್ನಪ್ಪಿದ್ದವು. ಈ ಹುಲಿ ಸಾವಿನ ಪ್ರಕರಣ ರಾಷ್ಟ್ರಮಟ್ಟದಲ್ಲಿ ಕೂಡ ಸದ್ದು ಮಾಡಿತ್ತು. ಹುಲಿ ಸಾವಿನ ತನಿಖೆಗಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೈ ಪವರ್ ಕಮಿಟಿ ರಚಿಸಿದ್ದರು. ಅಲ್ಲದೇ ಹುಲಿ ಸಾಯಿಸಲು ಯಾವ ಕೀಟನಾಶಕ ಬಳಸಲಾಗಿದೆ ಎಂದು ತಿಳಿಯಲು ಪ್ರಯೋಗಾಲಯಕ್ಕೆ ಹುಲಿಯ ಅಂಗಾಂಗಗಳನ್ನು ರವಾನೆ ಮಾಡಲಾಗಿತ್ತು. ಇದೀಗ ಲ್ಯಾಬ್ ವರದಿ ಕೂಡ ಸಿಕ್ಕಿದ್ದು, ಕಾರ್ಬೋಫುರಾನ್ ಎಂಬ ಕೀಟನಾಶಕವನ್ನು ಹಸುವಿಗೆ ಸಿಂಪಡಿಸಿದ್ದಾರೆಂದು ಗೊತ್ತಾಗಿದೆ.

ಇನ್ನೂ ಈ ಕೀಟನಾಶಕವು ವನ್ಯಪ್ರಾಣಿಗಳು, ಪಕ್ಷಿಗಳ ನರಮಂಡಲದ ಮೇಲೆ ತುಂಬಾನೇ ದುಷ್ಪರಿಣಾಮ ಬೀರುತ್ತವೆ ಎಂದು ತಿಳಿದುಬಂದಿದೆ. ಈ ಹಿಂದೆ ಉತ್ತರಖಂಡದ ಜಿಮ್ ಕಾರ್ಬೆಟ್‌ನಲ್ಲೂ ಕೂಡ ಈ ಕೀಟನಾಶಕ ಬಳಸಿದ್ದು, ಎರಡು ಹುಲಿಗಳು ಸತ್ತಿವೆ ಎಂಬ ವರದಿಯಾಗಿದೆ. ಅಲ್ಲದೇ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಆಲೂಗೆಡ್ಡೆ,ಸೋಯಾಬಿನ್, ಜೋಳ, ಭತ್ತದ ಕೃಷಿಯಲ್ಲಿ ಈ ಕೀಟನಾಶಕ ಬಳಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅಲ್ಲದೇ ಇತರ ರಾಸಾಯನಿಕದಂತೆ ಈ ಕಾರ್ಬೋಫುರಾನ್ ಕೀಟನಾಶಕ ತೀವ್ರ ವಾಸನೆಯಿಲ್ಲದ ಕಾರಣ ವನ್ಯಪ್ರಾಣಿಗಳು ವಾಸನೆ ಗುರುತಿಸುವುದು ಕಷ್ಟ. ಆ ಹಿನ್ನಲೆ ಕಾರ್ಬೋಫುರಾನ್ ಬಳಕೆಯಾಗಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಒಟ್ಟಿನಲ್ಲಿ 5 ಹುಲಿಗಳು ಕೂಡ ವಿಷ ಪ್ರಾಶನದಿಂದಲೇ ಸಾವನ್ನಪ್ಪಿವೆ ಎಂಬುದು ಲ್ಯಾಬ್ ವರದಿಯಿಂದ ಗೊತ್ತಾಗಿದೆ. ಇನ್ನೆರಡು ದಿನಗಳಲ್ಲಿ ಉನ್ನತ ಮಟ್ಟದ ತನಿಖಾ ತಂಡ ಅರಣ್ಯ ಸಚಿವರಿಗೆ ವರದಿ ಸಲ್ಲಿಸಲಿದ್ದು, ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗವಾಗುವ ಸಾಧ್ಯತೆಯಿದೆ.

RELATED ARTICLES
- Advertisment -
Google search engine

Most Popular