ಚಾಮರಾಜನಗರ: ನಾಡಹಬ್ಬ ಮೈಸೂರು ದಸರಾ ಭಾಗವಾಗಿ ಚಾಮರಾಜನಗರ ಜಿಲ್ಲೆಯಲ್ಲೂ ದಸರಾ ಮಹೋತ್ಸವವನ್ನು ಅಕ್ಟೋಬರ್ ೭, ೮ ಮತ್ತು ೯ರಂದು ಒಟ್ಟು ಮೂರು ದಿನಗಳ ಕಾಲ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು, ಅಧಿಕಾರಿಗಳನ್ನೊಳಗೊಂಡ ದಸರಾ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮೈಸೂರು ದಸರಾ ಭಾಗವಾಗಿ ಈ ಹಿಂದಿನಂತೆ ಚಾಮರಾಜನಗರ ದಸರಾ ಮಹೋತ್ಸವವನ್ನು ಮೂರು ದಿನಗಳ ಕಾಲ ಹೆಚ್ಚು ಆಕರ್ಷಕವಾಗಿ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು ದೀಪಾಲಂಕಾರವನ್ನು ವ್ಯಾಪಕವಾಗಿ ಪಟ್ಟಣದಲ್ಲಿ ಮಾಡಬೇಕು. ನಗರ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರ ಇರಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವ ಜಿಲ್ಲೆಯ ಕಲಾವಿದರು ಹಾಗೂ ಇನ್ನಿತರ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಬೇಕು. ಯುವಕರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಬೇಕು. ಜಿಲ್ಲೆಯ ಕ್ರೀಡಾ ಸಾಧಕರನ್ನು ಸನ್ಮಾನಿಸಬೇಕು. ಬೊಂಬೆ ಕೂರಿಸುವುದು, ಸಂವಿಧಾನ ಜಾಗೃತಿಯಂತಹ ಕಾರ್ಯಕ್ರಮಗಳು, ಜನಪದ, ರಂಗಗೀತೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಬೇಕು. ಜನನಮಂಟಪವನ್ನು ಸ್ವಚ್ಚಗೊಳಿಸಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂಬುದೂ ಸೇರಿದಂತೆ ಇನ್ನಿತರ ಹಲವು ಸಲಹೆ, ಅಭಿಪ್ರಾಯಗಳನ್ನು ಮುಖಂಡರು, ಕಲಾವಿದರು ಸಭೆಯಲ್ಲಿ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ನಾಡಹಬ್ಬ ದಸರಾ ಮಹೋತ್ಸವವನ್ನು ಚಾಮರಾಜನಗರ ಜಿಲ್ಲೆಯಲ್ಲೂ ಮೂರು ದಿನಗಳ ಕಾಲ ಸಾಂಪ್ರದಾಯಿಕ ಹಾಗೂ ಹೊಸ ಕಾರ್ಯಕ್ರಮಗಳ ರೂಪುರೇಷೆಯೊಂದಿಗೆ ನಡೆಸಲು ಎಲ್ಲರ ಸಲಹೆ, ಅಭಿಪ್ರಾಯವನ್ನು ಪಡೆಯಲಾಗಿದೆ. ಈ ಬಾರಿ ಇನ್ನಷ್ಟು ಆಕರ್ಷಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಡಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಹಾಗೂ ಸಾಂಪ್ರದಾಯಿಕವಾದ ಗಜ ಪೂಜೆ ಮೆರವಣಿಗೆಗೆ ಚಿಂತನೆ ನಡೆಸಲಾಗಿದ್ದು, ಅರಣ್ಯ ಇಲಾಖೆ ಹಾಗೂ ಇನ್ನಿತರ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಲಾಗುತ್ತಿದೆ. ಮೆರವಣಿಗೆಯಲ್ಲಿ ಸ್ತಬ್ದಚಿತ್ರ, ಕಲಾತಂಡಗಳಿಗು ಅವಕಾಶ ಮಾಡಿಕೊಡಲಾಗುವುದು. ಪಟ್ಟಣದಲ್ಲಿ ವಿದ್ಯುತ್ ದೀಪಾಲಂಕಾರ ವ್ಯಾಪಕವಾಗಿ ಮಾಡುವ ನಿಟ್ಟಿನಲ್ಲಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮಕ್ಕಳ ಪೌಷ್ಠಿಕತೆ ಕುರಿತು ಜಾಗೃತಿ ಮೂಡಿಸಲು ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಪ್ರಮುಖ ವೃತ್ತ ಸ್ಥಳಗಳಲ್ಲಿ ದೀಪಾಲಂಕಾರದೊಂದಿಗೆ ಸೆಲ್ಫಿ ಪಾಯಿಂಟ್ ಅನ್ನು ಸ್ಥಾಪಿಸಿ ದಸರಾಗೆ ಮತ್ತಷ್ಟು ಮೆರಗು ನೀಡಲು ಚಿಂತನೆ ನಡೆಸಲಾಗಿದೆ. ದಸರಾ ಕಾರ್ಯಕ್ರಮದಲ್ಲಿ ಎಲ್ಲರಿಗೂ ಮೆಚ್ಚುಗೆಯಾಗುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು. ಸ್ಥಳೀಯ ಕಲಾವಿದರಿಗೂ ಪ್ರಾಶಸ್ತ್ರ ನೀಡಲಿದ್ದು, ಇನ್ನಿತರ ಕಲಾವಿದರ ಆಕರ್ಷಕ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಗೂ ಏರ್ಪಾಡು ಮಾಡಲಾಗುವುದು. ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮ ಶೀರ್ಷಿಕೆಯಡಿ ಕಾರ್ಯಕ್ರಮ ನೀಡಲು ಅವಕಾಶ ಮಾಡಿಕೊಡಲಾಗುವುದು ಎಂದು ಜಿಲಕ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯ್ ಕುಮಾರ್, ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು, ಕಲಾವಿದರು, ವಿವಿಧ ಇಲಾಖೆಗಳ ಇನ್ನಿತರ ಅಧಿಕಾರಿಗಳು, ಇತರರು ಸಭೆಯಲಕ್ಲಿ ಉಪಸ್ಥಿತರಿದ್ದರು.