ಚಾಮರಾಜನಗರ: ಗಮಕ ಕಲೆಗೆ ಚಾಮರಾಜನಗರ ಒಂದು ಕಾಲದಲ್ಲಿ ತವರೂರಾಗಿತ್ತು .ಚಾಮರಾಜನಗರದ ಮಣ್ಣಿನಲ್ಲಿ ಗಮಕ ಕಲೆ ವಂಶಪಾರಂಪರ್ಯದಿಂದಲೂ ಅಡಗಿದೆ. ಈ ಕಲೆಯ ಬೆಳವಣಿಗೆಗೆ ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕ ರಚನೆಯಾಗಿದ್ದು ,ಪ್ರೋತ್ಸಾಹ ಮತ್ತು ಶ್ರಮದಿಂದ ಗಮಕ ಆಸಕ್ತರನ್ನು ಒಂದುಗೂಡಿಸಿ ಈ ಕಲೆಯನ್ನು ಯುವ ಪೀಳಿಗೆಗೆ, ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಆಸಕ್ತರಿಗೆ ಕಲಿಸುವ ವಾತಾವರಣವನ್ನು ನಿರ್ಮಿಸೋಣ ಎಂದು ಕರ್ನಾಟಕ ರಾಜ್ಯದ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತರು ಹಿರಿಯ ಗಮಕಿಗಳಾದ ಮೈಸೂರಿನ ಕೃಷ್ಣಗಿರಿ ರಾಮಚಂದ್ರ ರವರು ಅಭಿಪ್ರಾಯ ಪಟ್ಟರು.

ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು ,ಚಾಮರಾಜನಗರ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಾ ಗಮಕ ಒಂದು ವಿಶಿಷ್ಟವಾದ ಕಲೆಯಾಗಿದೆ. ಮೈಸೂರು ಪ್ರಾಂತ್ಯದಲ್ಲಿ ಮಹಾರಾಜರ ಆಶ್ರಯದಿಂದ ವಿಶ್ವ ಪ್ರಸಿದ್ಧಿ ಆಯಿತು. ನೂರಾರು ಗಮಕಿಗಳು ಕನ್ನಡ ಸಾಹಿತ್ಯದ ಮಹಾ ಕಾವ್ಯಗಳನ್ನು ವಿಶೇಷವಾಗಿ ಸಂಗೀತ, ಸಾಹಿತ್ಯ, ನಾಟಕದ ಸಮನ್ವಯತೆ ಕಲೆಯ ಮೂಲಕ ವಿಶೇಷವಾದ ರಾಗ ಹಾಗೂ ಶ್ರುತಿಬದ್ಧವಾಗಿ ಕಾವ್ಯವನ್ನು ಓದುವ ಮೂಲಕ ಜನ ಮಾನಸದಲ್ಲಿ ಸಂತೋಷ ,ಆನಂದ ಮತ್ತು ದೈವೀಕತೆಯನ್ನು ಸೃಷ್ಟಿ ಮಾಡಬಹುದು. ಚಾಮರಾಜನಗರ ಜಿಲ್ಲೆಯ ಹಿರಿಯ ಗಮಕಿಗಳಾದ ಅಶ್ವಥ್ ನಾರಾಯಣ, ಸಂಪತ್ ಕುಮಾರ್ ಆಚಾರ್, ರಾಮದಾಸ್ ಸುಬ್ರಹ್ಮಣ್ಯಂ ,ನಾಗೇಶ್ ರಾವ್ ವಿಜಯಲಕ್ಷ್ಮಿ, ಸುಂದರ ರಾಘವನ್ ಮುಂತಾದ ನೂರಾರು ಹೆಸರುಗಳು ಈ ಸಾಲಿನಲ್ಲಿ ಬರುತ್ತವೆ. ಆದರೆ ಕಳೆದ ದಶಕಗಳಿಂದ ಗಮಕ ಕಲೆ ಪ್ರೋತ್ಸಾಹವಿಲ್ಲದೆ ಸ್ವಲ್ಪ ಮಟ್ಟಿಗೆ ಕುಂಠಿತವಾಗಿತ್ತು .ಕರ್ನಾಟಕ ಗಮಕ ಕಲಾ ಪರಿಷತ್ತು ಉದಯವಾಗಿ ಎಲ್ಲ ಜಿಲ್ಲೆಗಳಲ್ಲಿ ಗಮಕ ಕಲೆಯನ್ನು ಬೆಳೆಸುವ ದೃಷ್ಟಿಯಲ್ಲಿ ಉತ್ಸಾಹಿ ತಂಡವನ್ನು ರಚಿಸಿದೆ. ಚಾಮರಾಜನಗರ ಜಿಲ್ಲೆಯ ಅಧ್ಯಕ್ಷರಾಗಿ ವಾಗ್ಮಿಗಳು, ಚಿಂತಕರು, ಸಂಘಟಕರು ಉತ್ತಮ ವ್ಯಕ್ತಿಯಾದ ಸುರೇಶ್ ಋಗ್ವೇದಿಯವರನ್ನು ನೇಮಿಸಿರುವುದು ಬಹಳ ಸಂತೋಷವನ್ನು ತಂದಿದೆ .ಗಮಕ ಕಲೆ ಅರಳಲಿ ಬೆಳೆಯಲಿ ಎಂದರು.
ಕರ್ನಾಟಕ ಗಮಕಲಾ ಪರಿಷತ್ತಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಹಿರಿಯಗಮಕಿ ಡಾ. ಎ ನಿರಂಜನ್ ಮಾತನಾಡಿ ಚಾಮರಾಜನಗರ ಜಿಲ್ಲೆ, ಮೈಸೂರು ಪ್ರಾಂತ್ಯದ ಒಂದು ಭಾಗವಾಗಿತ್ತು. ಚಾಮರಾಜನಗರ ರಾಮಸಮುದ್ರ, ಕಾಗಲವಾಡಿ, ಹರದನಹಳ್ಳಿ, ಕೊಳ್ಳೇಗಾಲ, ಗುಂಡ್ಲುಪೇಟೆ ಯಳಂದೂರು ಮುಂತಾದ ಕಡೆ ವಿಶೇಷವಾಗಿ ಗಮಕದ ವೈಭವ ಇತ್ತು. ಮತ್ತೆ ಇದನ್ನು ಪುನರುಸ್ತಾನಗೊಳಿಸಲು ಜಿಲ್ಲಾ ಗಮಕಲಾ ಪರಿಷತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸಲಿ ಎಂದರು.
ಡಾ. ಎ ನಿರಂಜನ್ ಹಾಗೂ ಶ್ರೀಮತಿ ಧರಿತ್ರಿ ಆನಂದ್ ರಾವ್ ರವರು ತಮ್ಮ ಕಾವ್ಯವಾಚನದ ಮೂಲಕ ನೆರೆದ ಸಭಿಕರಿಗೆ ಪರಮಾನಂದವನ್ನು ಉಂಟುಮಾಡಿದರು.
ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯ ಗೌರವ ಅಧ್ಯಕ್ಷ ಜಿಎಂ ಹೆಗಡೆ ರವರು ಮಾತನಾಡಿ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಗಮಕ ಕಲೆ ವ್ಯಾಪಕವಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಯುವಕರಲ್ಲಿ ಆಸಕ್ತಿಯನ್ನು ಉಳಿಸಿ ಬೆಳೆಸುವುದರಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಗಮಕಲಾ ಪರಿಷತ್ತಿನ ಅಧ್ಯಯ ಜಿಲ್ಲಾಧ್ಯಕ್ಷರಾದ ಸುರೇಶ್ ಎನ್ ಋಗ್ಬೇದಿ ಮಾತನಾಡಿ ಕನ್ನಡ ಸಾಹಿತ್ಯದಲ್ಲಿ ಗಮಕ ಕಲೆ ಮೇರು ಶಿಖರವಾಗಿದೆ. ಗಮಕ ಕಲೆಯ ಮೂಲಕ ಹಳೆಗನ್ನಡ ಸಾಹಿತ್ಯವನ್ನು ಮನಮುಟ್ಟುವಂತೆ ವಿವರಿಸಿ ತಿಳಿಸಿದಾಗ ಸಾಹಿತ್ಯದ ಗಟ್ಟಿತನ ಮತ್ತು ಕವಿಯ ದಿವ್ಯ ಚಿಂತನೆಗಳ ಸಂದೇಶಗಳು ಹೊರಬರುತ್ತವೆ. ಸುಶ್ರಾವ್ಯವಾಗಿ ಹಾಡಿದಾಗ ಮನಸ್ಸಿಗೆ ಅಪಾರ ನೆಮ್ಮದಿ ಸಿಗುತ್ತದೆ . ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ, ಶಿಕ್ಷಕ ವೃಂದ, ಮಹಿಳಾ ಮತ್ತು ಪುರುಷ ವರ್ಗಗಳಲ್ಲಿ ವಿಶೇಷವಾಗಿ ತರಬೇತಿಗಳನ್ನು ನಡೆಸಿ ಈ ಕಲೆಯನ್ನು ಬೆಳೆಸುವ ಉಳಿಸುವ ಜವಾಬ್ದಾರಿ ಮಾಡೋಣ ಎಂದು ತಿಳಿಸಿದರು.
ಸಭೆಯ ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಅಕ್ಕರವರು ವಹಿಸಿ ಆಶೀರ್ವದಿಸಿ ಜಿಲ್ಲೆಯಲ್ಲಿ ಗಮಕ ಕಲೆಯನ್ನು ಸಮೃದ್ಧವಾಗಿ ಬೆಳೆಸುವುದಕ್ಕಾಗಿ ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ. ಸುಂದರ ಸಮಾಜ ,ಶಾಂತ ಸಮಾಜ, ಕಲೆ ಸಾಹಿತ್ಯ ಗಮಕದಿಂದ ಮಾತ್ರ ಸಾಧ್ಯವಾಗಿದೆ . ಸುರೇಶ್ ಎನ್ ಋಗ್ವೇದಿಯವರನ್ನು ಜಿಲ್ಲಾಧ್ಯಕ್ಷರಾಗಿ ನೇಮಿಸಿರುವುದಕ್ಕಾಗಿ ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಬಿಕೆ ಆರಾಧ್ಯ ,ವಿಜಯಲಕ್ಷ್ಮಿ, ಡಾ.ಉಮಾರಾಣಿ, ವಾಸಂತಿ, ವೀರಶೆಟ್ಟಿ ,ಲಕ್ಷ್ಮೀನರಸಿಂಹ, ಕೆ ವೆಂಕಟರಾಜು, ಆರ್ ಡಿ ನಾಗರಾಜು ರವಿಚಂದ್ರಪ್ರಸಾದ್, ಪ್ರಫುಲ್ಲ, ವೇಣುಗೋಪಾಲ ಚಕ್ರವರ್ತಿ, ನಾಗಶ್ರೀ, ವಾಣಿಶ್ರೀ,ಶಿವಲಿಂಗ ಮೂರ್ತಿ, ಡಾ. ಪರಮೇಶ್ವರಪ್ಪ ಪದ್ಮಾಕ್ಷಿ ,ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು.