ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನ್ನಡದ ಸಂಸ್ಕೃತಿ, ಪರಂಪರೆ ,ವಾತಾವರಣ ಇನ್ನು ಉಳಿದಿರುವುದು ಹೆಮ್ಮೆಯ ವಿಚಾರ . ಗ್ರಾಮೀಣ ಪ್ರದೇಶದ ಜನರು ಹೆಮ್ಮೆಯಿಂದ ಅಚ್ಚ ಕನ್ನಡದಲ್ಲಿ ಮಾತನಾಡುವುದು, ವಿದ್ಯಾರ್ಥಿಗಳು ಹೆಚ್ಚು ಕನ್ನಡದಲ್ಲಿ ಕಲಿಯುತ್ತಿರುವುದು ಹೆಮ್ಮೆಯ ವಿಷಯವೆಂದು ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ಮೊಮ್ಮಗ ಪ್ರೊ .ದೀಪಕ್ ಆಲೂರು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಗಡಿಗ್ರಾಮ ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕರ್ನಾಟಕ ಕುಲ ಪುರೋಹಿತ ಆಲೂರು ವೆಂಕಟರಾಯರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ,ಕರ್ನಾಟಕ ಗಮಕಲಾ ಪರಿಷತ್ತು ಹಾಗೂ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಕರ್ನಾಟಕ ಏಕೀಕರಣ ವಿಶೇಷ ಉಪನ್ಯಾಸ ಹಾಗೂ ವೆಂಕಟರಾಯರ ವಿಶೇಷ ಕೊಡುಗೆ ಬಗ್ಗೆ ಉದ್ಘಾಟನೆ ನೆರವೇರಿಸಿ ಮಾತನಾಡಿ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಸರ್ವವನ್ನು ತ್ಯಾಗ ಮಾಡಿದ ಮಹಾನ್ ವ್ಯಕ್ತಿ . ಕನ್ನಡ ನೆಲ ಜಲ ಭಾಷೆ ಪ್ರದೇಶಗಳು ಇಂದು ಒಂದಾಗಿ ಕರ್ನಾಟಕ ರಾಜ್ಯವಾಗಿರುವ ಸಂಭ್ರಮದಲ್ಲಿರುವ ನಾವು ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ ಆಲೂರು ವೆಂಕಟರಾಯರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವಿಶೇಷ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಚ್ಚುಕಟ್ಟಾದ ಕಾರ್ಯಕ್ರಮವನ್ನು ವ್ಯವಸ್ತೆ ಮಾಡಿರುವ ಕನ್ನಡ ಸಂಘಟನೆಗೆ ಅಭಿನಂದನೆ ಸಲ್ಲಿಸಿದರು. ಆಲೂರು ವೆಂಕಟರಾಯರು ತಮ್ಮ ಜೀವನದಲ್ಲಿ ಕರ್ನಾಟಕತ್ವ ಶಬ್ದವನ್ನು ಏಕೀಕರಣದಲ್ಲಿ ಸಾಧಿಸಿದ ವೇದಾಂತಿ. ಕನ್ನಡದ ಭೀಷ್ಮ ಆಲೂರು ವೆಂಕಟರಾಯರು. ಇಡೀ ಜೀವನದಲ್ಲಿ ಕರ್ನಾಟಕದ ಮಂತ್ರವನ್ನೇ ಜಪಿಸಿ ಹರಿದು ಹಂಚಿಹೋದ ಕನ್ನಡಿಗರನ್ನು ಜಾಗೃತಗೊಳಿಸಿದ ಹಾಗೂ ಐತಿಹಾಸಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲರಾದ ಹರ್ಷ ಡಂಬಳ ಧಾರವಾಡ ರವರು ಮಾತನಾಡಿ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣದ ಸ್ಪೂರ್ತಿ. ಅವರ ಕರ್ನಾಟಕಗತ ವೈಭವ, ಕರ್ನಾಟಕತ್ವ ಸೂತ್ರಗಳು, ಕರ್ನಾಟಕತ್ವ ವಿಕಾಸ, ಕರ್ನಾಟಕ ವೀರರತ್ನಗಳ ಗ್ರಂಥಗಳು ಇಂದಿಗೂ ಜನಪ್ರಿಯವಾಗಿವೆ. ಕನ್ನಡದ ಬಗ್ಗೆ ವಿಶೇಷವಾದ ಅಭಿಮಾನ ,ಸಂಸ್ಕೃತಿ ಪರಂಪರೆ ,ಚಿಂತನೆಯ ಮೂಲ ಇತಿಹಾಸ ತಿಳಿಯಲು ಈ ಗ್ರಂಥಗಳು ಅಪಾರ ಪ್ರಭಾವ ಬೀರುತ್ತವೆ . ವೆಂಕಟರಾಯರು ಕನ್ನಡಕ್ಕಾಗಿ ಸಾರ್ವಜನಿಕ ಬದುಕಿನಲ್ಲಿ ಹೋರಾಟ ರೂಪಿಸಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು.

ಉಪನ್ಯಾಸಕ , ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕರ್ನಾಟಕದ ಸಮಗ್ರ ಇತಿಹಾಸ ಅರಿಯಲು ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿಯನ್ನು ಸ್ಥಾಪಿಸಿ, ನಾಡಿನ ಐತಿಹಾಸಿಕ ಘಟನೆಗಳ ಮಾಹಿತಿಗಳನ್ನು ಕಲೆಹಾಕಿ ವಿಜಯನಗರ ಸಾಮ್ರಾಜ್ಯ ಹಾಗೂ ರಾಜ್ಯವನ್ನು ಆಳಿದ ಕನ್ನಡದ ಶಕ್ತಿಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ,ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಕನ್ನಡಿಗರನ್ನು ಒಂದುಗೂಡಿಸಿದವರು. ಕನ್ನಡಿಗರನ್ನು ಒಂದುಗೂಡಿಸಲು ದಸರಾ ಹಬ್ಬ ,ಬಸವೇಶ್ವರ ಜಯಂತಿಗಳನ್ನು ಆಚರಿಸಿ ಕರ್ನಾಟಕದ ಶಕ್ತಿಯನ್ನು ತುಂಬಿದವರು. ಕನ್ನಡಿಗರನ್ನು ಜಾಗೃತಗೊಳಿಸಲು ಪತ್ರಿಕಾ ರಂಗ ದಲ್ಲಿಯೂ ಕೂಡ ಸಂಪಾದಕರಾಗಿ ಸೇವೆ ಸಲ್ಲಿಸಿ ಜಯ ಕರ್ನಾಟಕ, ವಾಗ್ಭೂಷಣ ,ಕರ್ಮವೀರ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಮಹತ್ವವಾದ ಲೇಖನಗಳನ್ನು ಬರೆದು ಸಂಪಾದಕೀಯಗಳ ಹೊಣೆಯನ್ನು ನಿರ್ವಹಿಸಿ ಪತ್ರಿಕಾ ರಂಗದ ಮೂಲಕ ಚಾಕೃತಗೊಳಿಸಿದ ವೆಂಕಟರಾಯರು ಎಂದೆಂದೂ ಅಮರರು ಎಂದು ಬಣ್ಣಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶಿವನಂಜಪ್ಪನವರು ವಹಿಸಿ ಧಾರವಾಡದಿಂದ ಆಗಮಿಸಿ ಚಾಮರಾಜನಗರ ಜಿಲ್ಲೆಯಲ್ಲಿ ಆಲೂರು ವೆಂಕಟರಾಯರ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ರೂಪಿಸಿರುವ ಟ್ರಸ್ಟಿಗೆ ಅಭಿನಂದಿಸಿ ಕನ್ನಡ ನಮ್ಮೆಲ್ಲರ ಮಾತೃಭಾಷೆ .ಕನ್ನಡಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು. ಕನ್ನಡವೇ ನಮ್ಮ ಉಸಿರು ಮತ್ತು ಶಕ್ತಿ ಎಂದು ತಿಳಿಸಿ ನಮ್ಮ ಭಾವನೆಗಳನ್ನು ಮಾತೃಭಾಷೆಯಲ್ಲಿ ತಿಳಿಸಿದಾಗ ಆಗುವ ಸಂತೋಷವೇ ಬೇರೆ ಎಂದು ತಿಳಿಸಿದರು.
ಕರ್ನಾಟಕ ಸುವರ್ಣ ಸಂಭ್ರಮದ ಸವಿನೆನಪಿನಲ್ಲಿ ಕಾಲೇಜು ಆವರಣದಲ್ಲಿ ಆಲೂರು ವೆಂಕಟರಾಯರ ಮೊಮ್ಮಗ ದೀಪಕ್ ಆಲೂರು ಗಿಡಗಳನ್ನು ನೆಟ್ಟರು. ಕಾಲೇಜು ವಾತಾವರಣ ಬಹಳ ಸುಂದರವಾಗಿತ್ತು ವಿದ್ಯಾರ್ಥಿಗಳಲ್ಲಿ ಪ್ರಕೃತಿ ,ನಾಡು, ನುಡಿ ಜಲ, ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಬೇಕು ಎಂದರು.
ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ವೆಂಕಟೇಶ ದೇಸಾಯಿ, ವಸಂತ ನಾಡಿಗೆರ, ಉಪನ್ಯಾಸಕ ಯೋಗಾನಂದ ಸ್ವಾಮಿ ,ಆರ್ ಮೂರ್ತಿ, ಬಸವಣ್ಣ, ಶಿವಸ್ವಾಮಿ, ರಮೇಶ್ ,ಸುರೇಶ್ ಉಪಸ್ಥಿತರಿದ್ದರು.