ಚಾಮರಾಜನಗರ: ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕು ಯಡವನಹಳ್ಳಿಯಲ್ಲಿ ನಡೆದಿದೆ.
ಶಿವರಾಜು(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಸಂಬಂಧಿಕರು ಹಾಗು ಗ್ರಾಮಸ್ಥರು ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ.
ಘಟನೆ ಸಂಬಂಧ 17 ಮಂದಿ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬನಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಗ್ರಾಮದ ಶಿವಣ್ಣನಾಯ್ಕ ಎಂಬಾತನಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಇದರಿಂದ ಮನನೊಂದು ಶಿವಣ್ಣನಾಯ್ಕ ಆತ್ಮಹತ್ಯೆ ಗೆ ಮುಂದಾಗಿದ್ದ. ಶಿವಣ್ಣನಾಯ್ಕನನ್ನು ಶಿವರಾಜು ಮನವೊಲಿಸಿ ಸಮಾಧಾನ ಪಡಿಸಿದ್ದ.

ಗ್ರಾಮದ ಯಜಮಾನರು ಪ್ರಕರಣದಲ್ಲಿ ನೀನು ಶಾಮೀಲಾಗಿದ್ದೀಯಾ ಎಂದು ಶಿವರಾಜುಗು ಸಾಮಾಜಿಕ ಬಹಿಷ್ಕಾರ ಹಾಕಿ 6 ಸಾವಿರ ರೂ ದಂಡ ವಿಧಿಸಿದ್ದರು.
ಇದರಿಂದ ಮನನೊಂದು ಶಿವರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.