Thursday, April 3, 2025
Google search engine

Homeರಾಜಕೀಯಚಾಮರಾಜನಗರ ನಗರಸಭೆ: ಬಿಜೆಪಿಯ ಸುರೇಶ್ ಅಧ್ಯಕ್ಷರಾಗಿ, ಮಮತಾ ಉಪಾಧ್ಯಕ್ಷರಾಗಿ ಆಯ್ಕೆ

ಚಾಮರಾಜನಗರ ನಗರಸಭೆ: ಬಿಜೆಪಿಯ ಸುರೇಶ್ ಅಧ್ಯಕ್ಷರಾಗಿ, ಮಮತಾ ಉಪಾಧ್ಯಕ್ಷರಾಗಿ ಆಯ್ಕೆ

ಚಾಮರಾಜನಗರ: ಕಾಂಗ್ರೆಸ್ ಎಸ್ ಡಿಪಿಐ ಮೈತ್ರಿಯಿಂದಾಗಿ ಬಹುಮತ ಇದ್ದರೂ ಆಪರೇಷನ್ ಕಮಲದಿಂದಾಗಿ ಚಾಮರಾಜನಗರ ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಸುರೇಶ್ ಅಧ್ಯಕ್ಷರಾಗಿ ಹಾಗೂ ಮಮತಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿಗೆ 15 ಮತಗಳು ಬಂದರೆ ಕಾಂಗ್ರೆಸ್ ಎಸ್ ಡಿಪಿಐ ಮೈತ್ರಿಕೂಟಕ್ಕೆ 14 ಮತಗಳು ದೊರೆತವು. ಕಾಂಗ್ರೆಸ್ ಶಾಸಕರು, ಸಂಸದರು ಆಗಮಿಸಿ ಮತ ಚಲಾಯಿಸಿದರೂ ಕಾಂಗ್ರೆಸ್ ಗೆ ಬಹುಮತ ದೊರಕದೆ ಮುಖಭಂಗ ಅನುಭವಿಸಿದೆ.

ಮೂವರು ಕಾಂಗ್ರೆಸ್ ಸದಸ್ಯರಾದ ಆರ್ ಪಿ ನಂಜುಂಡಸ್ವಾಮಿ, ನೀಲಮ್ಮ, ಭಾಗ್ಯಮ್ಮ ಸಭೆಗೆ ಹಾಜರಾಗಲಿಲ್ಲ. ಕಾಂಗ್ರೆಸ್ ಸದಸ್ಯೆ ಚಂದ್ರಕಲಾ ಬಿಜೆಪಿ ಪರವಾಗಿ ಮತ ಚಲಾಯಿಸಿದರು. ಹೀಗಾಗಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.

ಚಾಮರಾಜನಗರ ನಗರಸಭೆಯಲ್ಲಿ ಒಟ್ಟು 31 ಸ್ಥಾನಗಳಿವೆ. ಇದರಲ್ಲಿ ಬಿಎಸ್ ಪಿ ಸದಸ್ಯ ಪ್ರಕಾಶ್ ಅವರು ಸತತವಾಗಿ ಕೌನ್ಸಿಲ್ ಸಭೆಗೆ ಗೈರು ಹಾಜರಾದ್ದರಿಂದ ಅವರ ಸದಸ್ಯತ್ವ ಅನರ್ಹಗೊಂಡಿದೆ. ಹೀಗಾಗಿ 30 ಸದಸ್ಯ ಬಲಕ್ಕೆ 17 ಮತಗಳು ಅಧಿಕಾರ ಹಿಡಿಯಲು ನಿರ್ಣಾಯಕವಾಗಿದ್ದವು. ಕಾಂಗ್ರೆಸ್ 8, ಎಸ್ ಡಿಪಿಐ 6, ಪಕ್ಷೇತರ 1, ಶಾಸಕ, ಸಂಸದರ ಮತಗಳು ಸೇರಿ 17 ಮತಗಳು ಕಾಂಗ್ರೆಸ್ ಪಾಲಿಗಿದ್ದವು.

ಭಾರತೀಯ ಜನತಾ ಪಕ್ಷ ಆಪರೇಷನ್ ಕಮಲ ನಡೆಸಿ, ಮೂವರು ಕಾಂಗ್ರೆಸ್ ಸದಸ್ಯರು ಸಭೆಗೆ ಹಾಜರಾಗದಂತೆ ಮಾಡುವಲ್ಲಿ ಯಶಸ್ವಿಯಾಯಿತು.

ಅಲ್ಲದೇ ಇನ್ನೋರ್ವ ಕಾಂಗ್ರೆಸ್ ಸದಸ್ಯೆ ಚಂದ್ರಕಲಾ ಬಿಜೆಪಿ ಪರವೇ ಮತ ಚಲಾಯಿಸಿದರು. ಹೀಗಾಗಿ ಬಿಜೆಪಿಗೆ 15 ಮತಗಳು ದೊರೆತವು. ಬಿಜೆಪಿಯ ಸದಸ್ಯ ಮಹದೇವಯ್ಯ ಕಾಂಗ್ರೆಸ್ ಪರ ಮತ ಹಾಕಿದರು. ಆ ಮತವೂ ಬಿಜೆಪಿಗೆ ಬಂದಿದ್ದರೆ 16 ಮತಗಳಾಗುತ್ತಿತ್ತು.

ಇತ್ತ ಕಾಂಗ್ರೆಸ್ ಎಸ್ ಡಿಪಿಐ ಮೈತ್ರಿಕೂಟದಲ್ಲಿ ಕಾಂಗ್ರೆಸ್ ನಿಂದ ಶಾಸಕ ಸಂಸದ ಸೇರಿ 7 ಮತಗಳು, ಎಸ್ ಡಿಪಿಐ 6, ಬಿಜೆಪಿಯ ಮಹದೇವಯ್ಯ ಅವರ 1 ಮತ ಸೇರಿ 14 ಮತಗಳು ಬಂದವು.

ಇದರಿಂದಾಗಿ ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದರೂ, ಜಿಲ್ಲಾ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ವಿಫಲವಾಗಿದೆ. ಕಾಂಗ್ರೆಸ್ ಗೆ ಸ್ವಪಕ್ಷದ ಸದಸ್ಯರೇ ‘ಕೈ’ ಕೊಟ್ಟಿದ್ದಾರೆ.

ಇದಕ್ಕೂ‌ ಮೊದಲು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಆರ್ ಎಂ ರಾಜಪ್ಪ, ಬಿಜೆಪಿಯಿಂದ ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್- ಎಸ್ ಡಿಪಿಐ ಮೈತ್ರಿಕೂಟದ ಅಭ್ಯರ್ಥಿ ಅಬ್ರಾರ್ ಅಹಮದ್, ಬಿಜೆಪಿಯಿಂದ ಎಸ್.‌ಮಮತಾ ನಾಮಪತ್ರ ಸಲ್ಲಿಸಿದ್ದರು.

RELATED ARTICLES
- Advertisment -
Google search engine

Most Popular