ಚಾಮರಾಜನಗರ: ಶಂಕರ್ ನಾಗ್ ರವರ ಕೊಡುಗೆ ಅಪಾರ. ಅವರ ನೆನಪಿಸಿಕೊಳ್ಳುವ ಕಾರ್ಯಕ್ರಮ ನೂರಾರು ಜನರಿಗೆ ಸ್ಪೂರ್ತಿ, ಚೈತನ್ಯ ಹಾಗೂ ಶ್ರೇಯಸ್ಸು ಕೊಡುವ ಕಾರ್ಯಕ್ರಮ ಎಂದು ಖ್ಯಾತ ಚಲನಚಿತ್ರ ನಟ ರಮೇಶ್ ಭಟ್ ರವರು ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಶ್ರೀ ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಜನಪದ ಪರಿಷತ್ ವತಿಯಿಂದ ಶ್ರೀ ಶಂಕರ್ ನಾಗ್ ನೆನಪು ಕಾರ್ಯಕ್ರಮದಲ್ಲಿ ವಿಡಿಯೋ ಮೂಲಕ ಮಾತನಾಡಿ ಶಂಕರ್ ನಾಗ್ ರವರಲ್ಲಿ ಅಪಾರ ಪ್ರತಿಭೆ ಮತ್ತು ವಿಶೇಷ ಗುಣಗಳು ಇತ್ತು .16 ಗಂಟೆ ಕೆಲಸ ಮಾಡುವ ಶಂಕರ್ ನಾಗ್ ,ಸತ್ತ ಮೇಲೆ ಮಲಗಿರುವುದು ಇದ್ದೇ ಇರುತ್ತದೆ, ಬದುಕಿದಾಗ ಕಾರ್ಯ ಮಾಡೋಣ ಎನ್ನುವ ಚಿಂತನೆಯ ಮೂಲಕ ಮೈತುಂಬ ಕೆಲಸವನ್ನು ಹಚ್ಚಿಕೊಂಡು ಸದಾ ಕಾಲ ದುಡಿಯುವ ವಿಶೇಷ ಗುಣವನ್ನು ಹೊಂದಿದವರು . ಪ್ರತಿಯೊಬ್ಬರನ್ನು ಅರ್ಥಮಾಡಿಕೊಂಡು ಅವರ ತಪ್ಪುಗಳನ್ನು ತಿದ್ದಿ ಒಳ್ಳೆಯತನದ ಗುಣವನ್ನು ಬೆಳೆಸುತ್ತಿದ್ದ ವ್ಯಕ್ತಿ. ಹಿರಿಯರನ್ನು ಗೌರವಿಸುವುದು, ಬೇರೆಯವರ ಬಗ್ಗೆ ಕೀಳಾಗಿ ಮಾತನಾಡದೆ ತನ್ನ ಪಾಡಿಗೆ ವಿಶೇಷ ದೃಷ್ಟಿಕೋನ ಇಟ್ಟುಕೊಂಡು ಕನ್ನಡ ಚಿತ್ರರಂಗ ನೆನಪಿಸಿಕೊಳ್ಳುವ ನಾಟಕಗಳನ್ನ ,ಕಿರು ಚಿತ್ರಗಳನ್ನು, ಚಲನಚಿತ್ರಗಳನ್ನು, ವಿಚಾರ ಸಂಕಿರಣಗಳನ್ನು ಆಯೋಜಿಸಿದ ಮಹಾನ್ ನಟ . ನಿರ್ದೇಶಕ ಎಂದು ಬಣ್ಣಿಸಿ, ಸೋಮಾರಿತನವನ್ನು ಬಿಡಿ ಸದಾ ಒಳ್ಳೆಯ ಕಾರ್ಯವನ್ನು ಮಾಡಿ ಎನ್ನುವ ಅವರ ಸಂಕಲ್ಪವನ್ನು ಎಲ್ಲಾ ಅಭಿಮಾನಿಗಳು ರೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷರಾದ ಎಂ ರಾಮಚಂದ್ರ ರವರು ಶ್ರೀ ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟ ಕಳೆದ ಹಲವು ದಶಕಗಳಿಂದ ಶಂಕರ್ ನಾಗ್ ರವರ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಗಣ್ಯರಿಗೆ ಹಾಗೂ ಆಟೋ ಚಾಲಕರಿಗೆ ಗೌರವಿಸುವ ಕಾರ್ಯಕ್ರಮವನ್ನು ರೂಪಿಸಿ ಸಮಾಜಕ್ಕೆ ಆದರ್ಶವಾದ ಕಾರ್ಯಗಳನ್ನು ಮಾಡುತ್ತಿದೆ. ಹಿರಿಯ ಸಾಧಕರ ಸ್ಮರಣೆ ಮೂಲಕ ಸರ್ವರೂ ಉತ್ತಮ ಹಾದಿಯಲ್ಲಿ ಸಾಗಲು ಸಹಕಾರಿಯಾಗುವುದು ಎಂದರು.
ಶಂಕರ್ ನಾಗ್ ನುಡಿ ನಮನ ಸಲ್ಲಿಸಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ,ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ ಋಗ್ವೇದಿ ಮಾತನಾಡಿ ಶಂಕರ್ ನಾಗ್ ಅದ್ಭುತ ಪ್ರತಿಭೆ. ದೂರ ದೃಷ್ಟಿ ವಿಶಾಲ ದೃಷ್ಟಿ ಜ್ಞಾನ ದೃಷ್ಟಿ ವಿವೇಕ ದೃಷ್ಟಿ ಸಂಕಲ್ಪ ದೃಷ್ಟಿ ದುಡಿಮೆಯ ದೃಷ್ಟಿಕೋನದಿಂದ ಹೆಮ್ಮರವಾಗಿ ಬೆಳೆದ ಮಹಾನ್ ಪ್ರತಿಭೆ. ತಂತ್ರಜ್ಞಾನವಿಲ್ಲದ ಕಾಲದಲ್ಲಿ ಅವರ ಚಿತ್ರಗಳು ಮಿಂಚಿನ ಓಟ, ಆಕ್ಸಿಡೆಂಟ್, ಒಂದಾನೊಂದು ಕಾಲದಲ್ಲಿ ಚಿತ್ರಗಳು ಇಂದಿಗೂ ರೋಮಾಂಚನಕಾರಿಯಾದ ಚಿತ್ರಗಳಾಗಿವೆ. ಮೆಟ್ರೋ ಪರಿಕಲ್ಪನೆ ಶಂಕರ್ ನಾಗ್ ರವರ ದೂರದೃಷ್ಟಿಯ ಚಿಂತನೆಯ ಫಲವೆಂದು ತಿಳಿಸಿದರು. ಆಟೋ ರಾಜ ಚಲನಚಿತ್ರದ ಮೂಲಕ ಇಡೀ ಭಾರತದ ಆಟೋ ಮಾಲೀಕರು ಮತ್ತು ಚಾಲಕರಿಗೆ ಸಾಮಾಜಿಕ ಗೌರವವನ್ನು, ಕುಟುಂಬದ ಗೌರವವನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿ. ಇಂದಿಗೂ ಲಕ್ಷಾಂತರ ಆಟೋ ಚಾಲಕರು ಶಂಕರ್ ನಾಗ್ ರವರನ್ನು ಆರಾಧ್ಯ ದೈವವಾಗಿ ಕಾಣುತ್ತಿರುವುದೇ ಅದಕ್ಕೆ ಸಾಕ್ಷಿ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶ್ರೀ ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ನಾಗ್ ಹರದನಹಳ್ಳಿ ವಹಿಸಿ ಶಂಕರ್ ನಾಗ್ ನಮ್ಮೆಲ್ಲರ ದೈವವಾಗಿದ್ದಾರೆ. ಶಂಕರ್ ನಾಗ್ ರವರ ಚಲನಚಿತ್ರಗಳಿಂದ ಪ್ರೇರಿತರಾಗಿ ಸ್ಪೂರ್ತಿ ತುಂಬಿಕೊಂಡು ಅವರ ಮಾರ್ಗದಲ್ಲಿ ನಡೆಯುವುದೇ ನಮ್ಮ ಕರ್ತವ್ಯವಾಗಿದೆ. ಶಂಕರ್ ನೆನಪು ಸದಾ ಕಾಲ ನಾಡಿನಲ್ಲಿ ಇರುತ್ತದೆ. ಆಟೋ ಚಾಲಕರಿಗೆ ಗೌರವಿಸುವ ಮೂಲಕ ಅವರಿಗೆ ಸಮಾಜದ ಶಕ್ತಿಯನ್ನು ತುಂಬುವುದು ಶಂಕರ್ ನಾಗ್ ರವರ ಒಕ್ಕೂಟದ ಕಾರ್ಯವಾಗಿದೆ ಎಂದರು.
ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜ ಯೋಗಿನಿ ಬಿಕೆ ದಾನೇಶ್ವರಿ ರವರು ವಹಿಸಿ ಮಾತನಾಡಿ ಶಂಕರ್ ನಾಗ್ ಪ್ರತಿಭೆ ಅದಮ್ಯ ಚೇತನವಾಗಿದೆ. ಬಹುಮುಖ ಪ್ರತಿಭೆಯ ಶಂಕರ್ ನಾಗ್ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಅವರ ನೆನಪಿನಲ್ಲಿ ಕಲಾವಿದರು ಸಾಧಕರು, ಆಟೋ ಚಾಲಕರು, ಚಲನಚಿತ್ರರಂಗದ ಗಣ್ಯರನ್ನು ಗೌರವಿಸಿ ಸೇವೆಯ ಸ್ಪೂರ್ತಿಯನ್ನು ತುಂಬುತ್ತಿರುವುದು ಬಹಳ ಸಂತೋಷವಾಗಿದೆ ಎಂದರು.

ಶಂಕರ್ ನಾಗ್ ನೆನಪು ಕಾರ್ಯಕ್ರಮದ ಮೂಲಕ ಚಾಮರಾಜನಗರದ ರಾಮಸಮುದ್ರ ಪೂರ್ವ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀಕಾಂತ್, ಹಿರಿಯ ರಂಗಭೂಮಿ ಕಲಾವಿದರಾದ ಘಟಂ ಕೃಷ್ಣ, ಆಟೋ ಚಾಲಕರಾದ ಸುಬ್ರಹ್ಮಣ್ಯ, ಶಿವಣ್ಣಗೌಡ ರವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಜಯಣ್ಣ,ಉದ್ಯಮಿ ಜಯಸಿಂಹ, ಸುರೇಶ್ ಗೌಡ ,ಲಕ್ಷ್ಮೀನರಸಿಂಹ, ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣ ನಾಯಕ, ರಾಮಸಮುದ್ರದ ನಂಜುಂಡಸ್ವಾಮಿ, ಸಾಹಿದ ಬೇಗಂ, ರಂಗನಾಥ್, ಪದ್ಮಾಕ್ಷಿ ,ರವಿಚಂದ್ರ ಪ್ರಸಾದ್ , ಶ್ರೀನಿವಾಸ್ ಗೌಡ, ಸರಸ್ವತಿ ,ಶಿವ ಮಲ್ಲೇಗೌಡ ,ರಾಮಣ್ಣ ಉಪಸ್ಥಿತರಿದ್ದರು.
