ಹೊಸದಿಲ್ಲಿ: ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಎನ್ ಡಿಎ ಮೈತ್ರಿಕೂಟಕ್ಕೆ ಸೇರಿದ್ದಾರೆ ಎಂದು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಜಿ ಹೇಳಿದ್ದಾರೆ. ಇದರಿಂದ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
ಜಿತನ್ ರಾಮ್ ಮಾಂಜಿ ಅವರ ಪಕ್ಷವಾದ ಹಿಂದೂಸ್ಥಾನಿ ಅವಾಮ್ ಮಾಂಜಿ ಕೂಡಾ ಬಿಜೆಪಿ ನೇತೃತ್ವದ ಎನ್ ಡಿಎದ ಭಾಗವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಾಂಝಿ, ಚಂಪೈ ಸೊರೆನ್ ಹುಲಿಯಾಗಿದ್ದರು ಮತ್ತು ಹುಲಿಯಾಗಿಯೇ ಉಳಿಯುತ್ತಾರೆ ಎಂದಿದ್ದಾರೆ.
ಬಿಹಾರದಿಂದ ಬೇರ್ಪಟ್ಟು ಪ್ರತ್ಯೇಕ ಜಾರ್ಖಂಡ್ ರಾಜ್ಯವನ್ನು ರಚಿಸುವಲ್ಲಿ ಚಂಪೈ ಸೊರೆನ್ ಅವರ ಪಾತ್ರಕ್ಕಾಗಿ ಅವರನ್ನು ಟೈಗರ್ ಎಂದು ಕರೆಯಲಾಗುತ್ತದೆ.
ಈ ವರ್ಷದ ಜನವರಿಯಲ್ಲಿ ಭೂ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಹೇಮಂತ್ ಸೊರೆನ್ ಅವರನ್ನು ಬಂಧಿಸಿದ ಕಾರಣಕ್ಕೆ ರಾಜೀನಾಮೆ ನೀಡಿದ ನಂತರ ಚಂಪೈ ಸೊರೆನ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಆದರೆ, ಹೇಮಂತ್ ಸೊರೆನ್‌ಗೆ ಜಾಮೀನು ದೊರೆತಾಗ, ಚಂಪೈ ಸೊರೆನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಈ ವರ್ಷದ ಜುಲೈನಲ್ಲಿ ಮತ್ತೊಮ್ಮೆ ರಾಜ್ಯದ ಆಡಳಿತವನ್ನು ವಹಿಸಿಕೊಂಡರು.
ಸೊರೆನ್ ಸುದೀರ್ಘ ಟ್ವೀಟ್
“ನಮ್ಮ ಬೆವರು, ರಕ್ತ ಸುರಿದು ಕಟ್ಟಿದ ಪಕ್ಷದಲ್ಲಿ ನನ್ನ ಅಸ್ತಿತ್ವವೇ ಇಲ್ಲವೆನ್ನುವಂತೆ ನನ್ನನ್ನು ಅವಮಾನಿಸಲಾ ಗಿತ್ತು. 4 ದಶಕದ ರಾಜಕೀಯ ಜೀವನದಲ್ಲಿ ಅದೇ ಮೊದಲ ಬಾರಿಗೆ ನಾನು ಕುಗ್ಗಿಹೋದೆ. ನನ್ನ ಜನರೇ ನನ್ನನ್ನು ನೋಯಿಸಿದರು” ಎಂದು ರವಿವಾರ ರಾತ್ರಿ ಚಂಪೈ ಸೊರೆನ್ ಟ್ವೀಟ್ ಮಾಡಿದ್ದಾರೆ.
“ಅಧಿಕಾರದ ಆಸೆ ಇರದ ನನ್ನನ್ನು ವಿಪಕ್ಷ ಒಕ್ಕೂಟದ ನಾಯಕರು ಸಿಎಂ ಆಗುವಂತೆ ಕೇಳಿದರು. ಅದರಂತೆ ಜ.31ರಂದು ಸಿಎಂ ಆದೆ. ಬಳಿಕ ಜು.3ಕ್ಕೂ 2 ದಿನದ ಹಿಂದೆ ಇದ್ದಕ್ಕಿದ್ದಂತೆ ಸಿಎಂ ಆಗಿದ್ದ ನನ್ನ ಕಾರ್ಯಕ್ರಮಗಳನ್ನು ಪಕ್ಷ ರದ್ದುಗೊಳಿಸಿತ್ತು. ಪ್ರಜಾಪ್ರಭುತ್ವದಲ್ಲಿ ಸಿಎಂಗೆ ಇದಕ್ಕಿಂತ ದೊಡ್ಡ ಅವಮಾನ ಏನಿದೆ? ಬಳಿಕ ನನ್ನ ರಾಜೀನಾಮೆ ಕೇಳಿದರು. ಅಧಿಕಾರದ ಆಸೆ ಇಲ್ಲದ್ದಕ್ಕೆ ರಾಜೀನಾಮೆಯನ್ನೂ ಕೊಟ್ಟೆ. ಆದರೆ ನನ್ನ ಆತ್ಮ ಗೌರವವನ್ನು ಗಾಳಿಯಲ್ಲಿ ತೂರಿದ್ದರ ಬಗ್ಗೆ ಯಾರೂ ಚಿಂತಿಸಲಿಲ್ಲ. ಇದರಿಂದ ನಾನು ಕಣ್ಣೀರಿಟ್ಟೆ, ಅವಮಾನಕ್ಕೊಳಗಾದೆ. ಆ ಬಳಿಕ ನನ್ನ ಮುಂದೆ 3 ಹಾದಿ ಇದೆ ಎಂದು ನಿರ್ಧರಿಸಿದೆ. ಒಂದು ರಾಜಕೀಯ ನಿವೃತ್ತಿ ಅಥವಾ ಪಕ್ಷ ಸ್ಥಾಪನೆ, ಇಲ್ಲವೋ ಸಮಾನ ಮನಸ್ಕರೊಂದಿಗೆ ಹೆಜ್ಜೆ ಎಂದುಕೊಂಡಿದ್ದೆ. ಆ ಆಯ್ಕೆಗಳು ಆಗಲೂ ನನ್ನ ಮುಂದೆ ಇದ್ದವು, ಈಗಲೂ ಇವೆ” ಎಂದಿದ್ದಾರೆ.