ಹೊಸ ಸರ್ಕಾರ ರಚನೆಗೆ ಹಕ್ಕುಮಂಡಿಸಿದ ಹೇಮಂತ್ ಸೊರೆನ್
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದ ಚಂಪೈ ಸೊರೆನ್ ತಮ್ಮ ರಾಜಿನಾಮೆ ಪತ್ರವನ್ನು ನೀಡಿದರು.
ಚಂಪೈ ಸೊರೆನ್ ರಾಜಿನಾಮೆ ಬೆನ್ನಲೇ ಹೇಮಂತ್ ಸೊರೆನ್ ನೂತನ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಾಧ್ಯಕ್ಷ ಹಾಗೂ ಸಿಎಂ ಆಗಿದ್ದ ಹೇಮಂತ್ ಸೊರೆನ್ ಅವರನ್ನು ಬಂಧಿಸಲಾಗಿತ್ತು. ಹೇಮಂತ್ ಸೊರೆನ್ ರಾಜಿನಾಮೆ ಬಳಿಕ ಚಂಪೈ ಸೊರೆನ್ ಅವರನ್ನು ಜಾರ್ಖಂಡ್ ಸಿಎಂ ಮಾಡಲಾಯಿತು.
ಇದೀಗ ಹೇಮಂತ್ ಸೋರೆನ್‌ಗೆ ಜಾಮೀನು ಸಿಕ್ಕಿದೆ. ಜೈಲಿನಿಂದ ಹೊರಬಂದಿರುವ ಅವರು ಮೂರನೇ ಬಾರಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಬಹುದು. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಾಧ್ಯಕ್ಷ ಹೇಮಂತ್ ಸೊರೆನ್ ಅವರು ತಮ್ಮ ಪಕ್ಷದ ನೇತೃತ್ವದ ಮೈತ್ರಿಕೂಟದ ಶಾಸಕರ ಒಮ್ಮತದ ನಂತರ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮರಳುವ ಸಾಧ್ಯತೆಯಿದೆ.
ಚಂಪೈ ಸೊರೆನ್ ಅವರ ರಾಂಚಿ ನಿವಾಸದಲ್ಲಿ ಆಡಳಿತಾರೂಢ ಮೈತ್ರಿಕೂಟದ ಶಾಸಕರ ನಡುವೆ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಮತ್ತು ರಾಜ್ಯಾಧ್ಯಕ್ಷ ರಾಜೇಶ್ ಠಾಕೂರ್ ಉಪಸ್ಥಿತರಿದ್ದರು. ಇವರಲ್ಲದೆ ಹೇಮಂತ್ ಸೋರೆನ್ ಸಹೋದರ ಬಸಂತ್ ಮತ್ತು ಪತ್ನಿ ಕಲ್ಪನಾ ಕೂಡ ಉಪಸ್ಥಿತರಿದ್ದರು. ಹೇಮಂತ್ ಸೊರೇನ್ ಮತ್ತೆ ಮುಖ್ಯಮಂತ್ರಿಯಾಗಲು ಮತ್ತೆ ಒಪ್ಪಿಗೆ ಸೂಚಿಸಲಾಯಿತು.