ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು- ಕೊಡಗು ಹಾಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹೆಸರು ಹೇಳದೆ ಮಾಜಿ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಚಾಮುಂಡಿ ಬೆಟ್ಟದ ಪ್ರಾಧಿಕಾರ ಸ್ಥಾಪನೆಗೆ ರಾಜಮನೆತನದ ವಿರೋಧ ವಿಚಾರವಾಗಿ ಕುರಿತು ಇಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಾನು ಸಿಎಂ ಸಿದ್ದರಾಮಯ್ಯರವರನ್ನು ಕೆಲವು ಸೈದ್ಧಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ.ಹಾಗೆಂದು ಚಾಮುಂಡೇಶ್ವರಿ ಕ್ಷೇತ್ರ ಪ್ರಾಧಿಕಾರದ ಅಗತ್ಯವಿದೆ ಎಂದು ಸಂಸದ ಯದುವೀರ್ ಒಡೆಯರ್ಗೆ ಟಾಂಗ್ ನೀಡಿದರು.
ಬೆಳವಣಿಗೆ ನಿಯಂತ್ರಿಸಲು, ಬೆಟ್ಟದ ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರದ ಅವಶ್ಯಕತೆ ಇದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಬೇಕು. ಇದೆಲ್ಲಾ ಆಗಬೇಕಿದ್ದರೆ ಒಂದು ಪ್ರಾಧಿಕಾರ ಬೇಕೇ ಬೇಕು. ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರಬೇಕೆಂದು ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯ ಪ್ರಾಧಿಕಾರ ರಚನೆ ಮಾಡಿದ್ದಾರೆ, ಇದು ಒಳ್ಳೆಯ ಕೆಲಸ ಎಂದು ಹೇಳಿದರು.
ಆಸ್ತಿ ವಿಚಾರವಾಗಿ ಮಾತನಾಡುವುದಿಲ್ಲ. ಆದರೆ, ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ಪ್ರತಾಪ್ ಸಿಂಹ ಹೇಳಿದರು.
ಅಮೃತ್ ಯೋಜನೆಯ ಕುಡಿಯುವ ನೀರು ತಲುಪದಿರಲು ಕಾರಣ ಯಾರು? ನಾನು ಹೇಳಿದರೆ ವಿವಾದ ಆಗುತ್ತದೆ. ಪೈಪ್ಲೈನ್ ಬಗ್ಗೆ ನೀವೇ ನೋಡಿ ಎಂದು ಯದುವೀರ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.