ಮೈಸೂರು: ಮೈಸೂರಿನಲ್ಲಿ ಮಹಿಳೆಯರ ಸುರಕ್ಷತೆ ಕಾಪಾಡಲು ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೊತ್ ಅವರು ಚಾಲನೆ ನೀಡಿದರು.
ಅರಮನೆ ನಗರಿಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರ ಶೋಷಣೆಗಳನ್ನು ನಿಯಂತ್ರಿಸಿ ಅವರ ರಕ್ಷಣೆಗಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನ ಸಂಚರಿಸಲಿದೆ.
ಕಾರ್ಯಕ್ರಮದಲ್ಲಿ ಡಿಸಿಪಿ ಜಾಹ್ನವಿ, ಹಿರಿಯ ಪೊಲೀಸ್ ಅಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಮೈಸೂರು ಅರಮನೆ ಕೋಟೆ ಆಂಜನೇಯ ದೇಗುಲ ಬಳಿ ಮೈಸೂರು ನಗರ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮ ಆಯೋಜಿಸಿ ಮಹಿಳೆಯರ ಸುರಕ್ಷತೆಗಾಗಿ ಸುರಕ್ಷಾ ಪಡೆ ವಾಹನಗಳಿಗೆ ಚಾಲನೆ ನೀಡಿದೆ. ಮಹಿಳೆಯರ ಸುರಕ್ಷತೆ ಕಾಪಾಡಲು ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನ ರಸ್ತೆಗಿಳಿದಿದೆ.
ಈ ಹಿಂದೆ ಹೊಸ ವರ್ಷದ ಸಮಯದಲ್ಲಿ ಮಹಿಳೆಯರ ಹಿತದೃಷ್ಟಿಯಿಂದ ಮೈಸೂರು ನಗರದಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಎಂಟು ಚಾಮುಂಡಿ ಪಡೆ (ಸುರಕ್ಷತಾ ಪಿಂಕ್ ಗರುಡಾ) ರಚಿಸಲಾಗಿತ್ತು. ಈ ಮೂಲಕ ಯುವತಿಯರಿಗೆ ಕೀಟಲೆ ಮಾಡುವ ಪುಂಡರ ಹೆಡೆಮುರಿ ಕಟ್ಟಲಾಗಿತ್ತು.
ಹೊಸ ವರ್ಷ ಆಚರಣೆ ವೇಳೆ ಮೈಸೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಹಿಳೆಯರ ರಕ್ಷಣೆ ದೃಷ್ಟಿಯಿಂದ ಚಾಮುಂಡಿ ಪಡೆ ಕಾರ್ಯ ನಿರ್ವಹಿಸಿತ್ತು. ಇದೀಗ ಇದೇ ನಿಟ್ಟಿನಲ್ಲಿ ಮಹಿಳೆಯರ ರಕ್ಷಣೆಗಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ ನೀಡಲಾಗಿದೆ.