ಮೈಸೂರು: ಪದವಿ ಹಂತದ ವಿದ್ಯಾರ್ಥಿಗಳು ತಮ್ಮ ಆಲೋಚನಾ ಶಕ್ತಿ ಬದಲಾಯಿಸಿಕೊಂಡರೆ ಬದುಕಿನಲ್ಲಿ ಬೆಳಕು ಕಾಣಲು ಸಾಧ್ಯ ಎಂದು ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಪ್ರಸನ್ನ ಕುಮಾರ್ ತಿಳಿಸಿದರು.
ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ, ಬಿಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿ ವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಜ್ಞಾನದಿಂದ ಮಾತ್ರ ಘನತೆ ಬರಲು ಸಾಧ್ಯ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದಲ್ಲಿ ಮನಸ್ಸು ಮುಖ್ಯ ಪಾತ್ರ ವಹಿಸುತ್ತದೆ. ಸಾರ್ಥಕ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಅತಿಯಾದ ಶ್ರಮ ಬೇಕು. ಆಗ ಮಾತ್ರ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ. ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮನಸ್ಸು ಬಹಳ ಮುಖ್ಯ. ಇದಕ್ಕೆ ಸಾಕಷ್ಟು ತಯಾರಿ ಬೇಕು. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಲು ಪ್ರತಿಯೊಬ್ಬರ ಶ್ರಮ, ಶ್ರದ್ಧೆ ಆಸಕ್ತಿ ಹಾಗೂ ಆಳವಾದ ಜ್ಞಾನ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ಶಿಕ್ಷಣಕ್ಕೆ ಎಲ್ಲವನ್ನು ಪರಿವರ್ತಿಸುವ ಶಕ್ತಿ ಇದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಮಾತನಾಡಿ, ಬೇರೆ ದೇಶದ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಗಾಗಬೇಡಿ. ನಮ್ಮ ದೇಶದ ಸಂಸ್ಕೃತಿ ಉಳಿಸಿ. ವಿದ್ಯಾರ್ಥಿಗಳು ಶ್ರಮಪಟ್ಟು ಅರ್ಥಪೂರ್ಣ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಹದೇವಸ್ವಾಮಿ ಮಾತನಾಡಿ, ನಮ್ಮ ಜೀವನದಲ್ಲಿ ಸಾಧನೆ ಮುಖ್ಯ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ನಮ್ಮ ಕಾಲೇಜು ನಿಮ್ಮೊಂದಿಗೆ ಇರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಪುಟ್ಟಸ್ವಾಮಿ, ಕಚೇರಿಯ ಅಧಿಕ್ಷಕ ಡಾ.ಬಸವರಾಜು.ಎಂ.ಪಿ, ಸಹಾಯಕ ಪ್ರಾಧ್ಯಾಪಕ ಡಾ.ಟಿ.ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.