Friday, April 4, 2025
Google search engine

Homeಅಪರಾಧಕಾನೂನುಚೆಕ್‌ ಬೌನ್ಸ್‌ ಪ್ರಕರಣ: ₹2.25 ಲಕ್ಷ ಪಾವತಿಗೆ ಸ್ನೇಹಮಯಿ ಕೃಷ್ಣಗೆ ಆದೇಶ; ವಿಫಲವಾದಲ್ಲಿ ಒಂದು ವರ್ಷ...

ಚೆಕ್‌ ಬೌನ್ಸ್‌ ಪ್ರಕರಣ: ₹2.25 ಲಕ್ಷ ಪಾವತಿಗೆ ಸ್ನೇಹಮಯಿ ಕೃಷ್ಣಗೆ ಆದೇಶ; ವಿಫಲವಾದಲ್ಲಿ ಒಂದು ವರ್ಷ ಜೈಲು ಶಿಕ್ಷೆ

ಮೈಸೂರು: ಪರಿಚಿತರಿಂದ ಪತ್ರಿಕಾ ಉದ್ಯಮ ಮತ್ತು ಗೃಹ ಕೃತ್ಯದ ಖರ್ಚಿಗಾಗಿ ಪಡೆದ ಹಣವನ್ನು ಹಿಂದಿರುಗಿಸದ ಹಿನ್ನೆಲೆಯಲ್ಲಿ ವರ್ಗಾವಣೆಯ ಲಿಖಿತಗಳ ಅಧಿನಿಯಮ (ಎನ್‌ಐ) ಕಾಯಿದೆ ಅಡಿ ದಾಖಲಾಗಿದ್ದ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಮುಡಾ ಪ್ರಕರಣದಲ್ಲಿ ಪ್ರಮುಖ ದೂರುದಾರರಾಗಿರುವ ಸ್ನೇಹಮಯಿ ಕೃಷ್ಣ ಅವರನ್ನು ದೋಷಿ ಎಂದು ಮೈಸೂರಿನ ಸಿವಿಲ್‌ ನ್ಯಾಯಾಲಯವು ಈಚೆಗೆ ತೀರ್ಮಾನಿಸಿದ್ದು, ₹2.25 ಲಕ್ಷ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಒಂದು ವರ್ಷ ಸಾಮಾನ್ಯ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದೆ.

ಮೈಸೂರಿನ ಎನ್‌ ಕುಮಾರ್‌ ಅವರು ಹೂಡಿದ್ದ ದಾವೆಯ ವಿಚಾರಣೆ ನಡೆಸಿ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಎಚ್‌ ಟಿ ಅನುರಾಧಾ ತೀರ್ಪು ಪ್ರಕಟಿಸಿದ್ದಾರೆ.

“ಆರೋಪಿ ಸ್ನೇಹಮಯಿ ಕೃಷ್ಣ ಎನ್‌ಐ ಕಾಯಿದೆ ಸೆಕ್ಷನ್‌ 138ರ ಅಡಿ ದೋಷಿಯಾಗಿದ್ದು, ಅವರಿಗೆ ₹2.25 ಲಕ್ಷ ದಂಡ ವಿಧಿಸಲಾಗಿದೆ. ತಪ್ಪಿದಲ್ಲಿ ಸ್ನೇಹಮಯಿ ಕೃಷ್ಣ ಒಂದು ವರ್ಷ ಸಾಮಾನ್ಯ ಜೈಲು ಶಿಕ್ಷೆ ಅನುಭವಿಸಬೇಕು. ಶಿಕ್ಷೆಯ ಮೊತ್ತದ ಪೈಕಿ ದೂರುದಾರ ಕುಮಾರ್‌ ಅವರು ₹2.20 ಲಕ್ಷ ಪಡೆಯಲು ಅರ್ಹರಾಗಿದ್ದು, ಉಳಿದ ₹5,000 ವನ್ನು ಪ್ರಕರಣದ ವೆಚ್ಚವಾಗಿ ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಬೇಕು” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ದೂರುದಾರ ಕುಮಾರ್‌ ಪರವಾಗಿ ವಕೀಲ ಸಿ ಎಂ ಜಗದೀಶ್‌ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಸ್ನೇಹಮಯಿ ಕೃಷ್ಣ 2012ರ ಡಿಸೆಂಬರ್‌ನಲ್ಲಿ ಪತ್ರಿಕಾ ಉದ್ಯಮ ಅಭಿವೃದ್ಧಿಗೊಳಿಸಲು ಮೂರು ತಿಂಗಳಲ್ಲಿ ಮರು ಪಾವತಿಸುವುದಾಗಿ ₹1.75 ಲಕ್ಷ ಸಾಲ ಪಡೆದಿದ್ದರು. ಈ ಸಾಲದ ಮರು ಪಾವತಿಗಾಗಿ ದಿ ಮೈಸೂರು ಮರ್ಚೆಂಟ್‌ ಕೋ-ಆಪ್‌ ಬ್ಯಾಂಕ್‌ ಲಿಮಿಟೆಡ್‌ ಬ್ಯಾಂಕಿನ ಚೆಕ್‌ ಅನ್ನು 16.04.2013ರಂದು ನೀಡಿದ್ದರು. ಇದನ್ನು ನಗದೀಕರಿಸಲು ಮೈಸೂರಿನ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮೊರೆ ಹೋಗಲಾಗಿತ್ತು. ಸ್ನೇಹಮಯಿ ಕೃಷ್ಣ ಖಾತೆಯಲ್ಲಿ ಹಣವಿಲ್ಲದಿರುವುದರಿಂದ ಚೆಕ್‌ ಅಮಾನ್ಯಗೊಂಡಿತ್ತು. ಈ ಸಂಬಂಧ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 17.04.2013ರಂದು ಹಿಂಬರಹ ನೀಡಿತ್ತು. ಇದನ್ನು ಆಧರಿಸಿ ಸ್ನೇಹಮಯಿ ಕೃಷ್ಣಗೆ 06.06.2013ರಂದು ಕಾನೂನು ಬದ್ಧ ನೋಟಿಸ್‌ ಕಳುಹಿಸಿದ್ದರೂ ಸಹ ಅವರು ಹಣ ಹಿಂದಿರುಗಿಸಿರಲಿಲ್ಲ. ಹೀಗಾಗಿ, ಎನ್‌ಐ ಕಾಯಿದೆ ಸೆಕ್ಷನ್‌ 138ರ ಅಡಿ ಕುಮಾರ್‌ ಚೆಕ್‌ ಬೌನ್ಸ್‌ ಪ್ರಕರಣ ದಾಖಲಿಸಿದ್ದರು.

RELATED ARTICLES
- Advertisment -
Google search engine

Most Popular