ಚೆನ್ನೈ: ಚೆನ್ನೈನ ಮರೀನಾ ಬೀಚ್ ನಲ್ಲಿ ಭಾನುವಾರ ನಡೆದ ಮೆಗಾ ವೈಮಾನಿಕ ಪ್ರದರ್ಶನದಲ್ಲಿ (ಏರ್ ಶೋ) ದುರಂತ ಸಂಭವಿಸಿದೆ. ಭಾರತೀಯ ವಾಯುಪಡೆ 92 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆ ಹಿನ್ನೆಲೆ ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆದ ಏರ್ ಶೋ ವೇಳೆ ಬಿಸಿಲಿನತಾಪಕ್ಕೆ 5 ಮಂದಿ ಸಾವಾಗಿದ್ದು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ವಾಯುಪಡೆ ಸಂಸ್ಥಾಪನಾ ದಿನ ನಿಮಿತ್ತ ದಕ್ಷಿಣ ಭಾರತದಲ್ಲಿ ನಡೆದ ಮೊದಲ ಏರ್ ಶೋ ಇದಾಗಿತ್ತು. ಕಾರ್ಯಕ್ರಮದಲ್ಲಿ 72 ವಿಮಾನಗಳು ವಿವಿಧ ಸಾಹಸಗಳನ್ನು ಪ್ರದರ್ಶಿಸಿದ್ದವು.
ವೈಮಾನಿಕ ಪ್ರದರ್ಶನ ವೀಕ್ಷಿಸಲು 15 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು ಎಂದು ಅಂದಾಜಿಸಲಾಗಿದ್ದು, ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು. ಏರ್ ಶೋ ವೀಕ್ಷಿಸಿ ವಾಪಾಸ್ ತೆರಳುವಾಗ ಬಿಸಿಲಿನ ತಾಪಕ್ಕೆ ಜನರ ನಡುವೆ ನೂಕು ನುಗ್ಗಲು ಸಂಭವಿಸಿದೆ. ಈ ವೇಳೆ ಉಸಿರಾಡಲಾಗದೇ 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಲ್ಲಿ ಹೆಚ್ಚಿನ ಜನಸಮೂಹ ಸೇರಿದ್ದರಿಂದ ವಿಪರೀತ ಸೆಖೆಯ ನಡುವೆ ಉಸಿರುಗಟ್ಟುವಿಕೆ, ಒತ್ತಡದಿಂದ ಅಸ್ವಸ್ಥರಾಗಿದ್ದರು.
ಮೃತರನ್ನು ಜಾನ್ (60), ತಿರುವೊಟ್ಟಿಯೂರು ಮೂಲದ ಕಾರ್ತಿಕೇಯನ್, ದಿನೇಶ್ ಕುಮಾರ್ (37), ಪೆರುಂಗಲತ್ತೂರಿನ ಶ್ರೀನಿವಾಸನ್, ಎಂದು ಗುರುತಿಸಲಾಗಿದೆ.
ಆಂಬ್ಯುಲೆನ್ಸ್‌ಗಳು ಸಕಾಲಿಕ ಸೇವೆ ಒದಗಿಸಲು ಜನರಿಂದ ತುಂಬಿದ ಮಾರ್ಗಗಳಲ್ಲಿ ಸಂಚರಿಸಲಾಗದೆ ಹೆಣಗಾಡುವಂತಾಗಿತ್ತು. ಚೆನ್ನೈ ಪೊಲೀಸರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಸೂಕ್ತ ತುರ್ತು ಸೇವೆ ನೀಡಲು ಸಾಧ್ಯವಾಗಲಿಲ್ಲ.
ಏರ್ ಶೋನಲ್ಲಿ 72 ವಿಮಾನಗಳು ಭಾಗಿ
ವಾಯುಸೇನೆಯ ಈ ಪ್ರತಿಷ್ಠಿತ ಏರ್ ಶೋನಲ್ಲಿ ರಫೇಲ್ ಸೇರಿದಂತೆ 72 ವಿಮಾನಗಳು ಪಾಲ್ಗೊಂಡಿದ್ದವು. ಸ್ವದೇಶಿ ನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂಡ್ ಮತ್ತು ಹೆರಿಟೇಜ್ ವಿಮಾನ ಡಕೋಟಾ ಕೂಡ ಏರ್ ಶೋನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದವು. ಈ ಏರ್ ಶೋ ವಿಶೇಷ ಗರುಡ ಫೋರ್ಸ್ ಕಮಾಂಡೋಗಳ ಸಿಮ್ಯುಲೇಟೆಡ್ ರಕ್ಷಣಾ ಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರದರ್ಶನವನ್ನು ಒಳಗೊಂಡಿತ್ತು.