Friday, April 18, 2025
Google search engine

Homeಅಪರಾಧಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

ಬಸ್‌ ಡ್ರೈವರ್‌ಗೆ ಎದೆನೋವು: ಬ್ರೇಕ್‌ ಹಾಕಿ ಅಪಾಯ ತಪಿಸಿದ ಎಎಸ್‌ಐ

ಬೆಂಗಳೂರು: ಶಾಂತಿನಗರದ ಬಳಿ ಬಿಎಂಟಿಸಿ ಬಸ್‌ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿರುವುದನ್ನು ಗಮನಿಸಿದ ಸಂಚಾರ ವಿಭಾಗದ ಎಎಸ್‌ಐವೊಬ್ಬರು ಕೂಡಲೇ ಸಿನಿಮೀಯ ಶೈಲಿಯಲ್ಲಿ ಬಸ್‌ನೊಳಗೆ ಹೋಗಿ ಹ್ಯಾಂಡ್‌ ಬ್ರೇಕ್‌ ಹಾಕಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಹಲಸೂರು ಗೇಟ್‌ ಸಂಚಾರ ಠಾಣೆಯ ಎಎಸ್‌ಐ ರಘುಕುಮಾರ್‌ ಅನಾಹುತ ತಪ್ಪಿಸಿದವರು. ಬುಧವಾರ ಮಧ್ಯಾಹ್ನ 3.50ರ ಸುಮಾರಿಗೆ ಶಾಂತಿನಗರದ ಜೋಡಿರಸ್ತೆಯಲ್ಲಿ ಚಾಲಕ ವೀರೇಶ್‌ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಲಾಯಿಸಿಕೊಂಡು ಬರುತ್ತಿದ್ದರು. ಆ ವೇಳೆ ಮಾರ್ಗಮಧ್ಯೆ ಚಾಲಕ ವೀರೇಶ್‌ಗೆ ಎದೆನೋವು ಕಾಣಿಸಿಕೊಂಡಿತ್ತು. ವೀರೇಶ್‌ ಚಾಲಕನ ಸೀಟಿನಲ್ಲೇ ಒಂದು ಕಡೆ ವಾಲಿದ್ದರು. ಹೀಗಾಗಿ ಬಸ್‌ ನಿಧಾನವಾಗಿ ಚಲಿಸುತ್ತಿತ್ತು. ಆ ವೇಳೆ ಶಾಂತಿನಗರ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ರಘುಕುಮಾರ್‌ ಅನುಮಾನಗೊಂಡು, ಬಸ್‌ ಗಮನಿಸಿದಾಗ ಅದರಲ್ಲಿ ಚಾಲಕ ಎದೆನೋವಿನಿಂದ ಬಳಲುತ್ತಿರುವುದು ಕಂಡು ಬಂದಿತ್ತು. ತಡಮಾಡದೇ ಕೂಡಲೇ ಬಸ್ಸಿನ ಬಾಗಿಲು ತೆಗೆದು ಸಿನಿಮೀಯ ಶೈಲಿಯಲ್ಲಿ ಒಳಗೆ ಹೋಗಿ ಚಾಲಕನ ಸೀಟಿನ ಪಕ್ಕದಲ್ಲಿದ್ದ ಹ್ಯಾಂಡ್‌ ಬ್ರೇಕ್‌ ಹಾಕಿ ಬಸ್‌ನ್ನು ಮಾರ್ಗಮಧ್ಯೆದಲ್ಲೇ ನಿಲ್ಲಿಸಿದ್ದರು.

ಅದೇ ಬಸ್‌ನ ನಿರ್ವಾಹಕನ ಸಹಾಯದಿಂದ ಚಾಲಕ ವೀರೇಶ್‌ನನ್ನು ಬಸ್ಸಿನಿಂದ ಕೆಳಗಿಳಿಸಿದ್ದರು. ಮತ್ತೂಂದು ಸಿಗ್ನಲ್‌ ಬಳಿ ಕರ್ತವ್ಯದಲ್ಲಿದ್ದ ಅಶೋಕನಗರ ಸಂಚಾರ ಠಾಣೆಯ ಪ್ರಸನ್ನಕುಮಾರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಅವರ ಸಹಾಯದಿಂದ ವೀರೇಶ್‌ ಅವರನ್ನು ಆಟೋದಲ್ಲಿ ಕೂರಿಸಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.

30ಕ್ಕೂ ಹೆಚ್ಚು ಪ್ರಯಾಣಿಕರ ರಕ್ಷಣೆ

ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಇದೀಗ ಸಮಯಕ್ಕೆ ಸರಿಯಾಗಿ ರಘುಕುಮಾರ್‌ ಹ್ಯಾಂಡ್‌ ಬ್ರೇಕ್‌ ಹಾಕದಿದ್ದರೆ ಬಸ್‌ ಇತರೇ ವಾಹನಗಳಿಗೆ ಡಿಕ್ಕಿ ಹೊಡೆದು ಅಥವಾ ರಸ್ತೆ ವಿಭಜಕಕ್ಕೆ ಗುದ್ದಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದವು. ಸಂಚಾರ ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಮತ್ತು ಚಾಲಕ ವೀರೇಶ್‌ ಅವರ ಪ್ರಾಣ ಉಳಿದಿದೆ. ಸದ್ಯ ವೀರೇಶ್‌ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಎಎಸ್‌ಐ ರಘುಕುಮಾರ್‌ ಸಮಯಕ್ಕೆ ಸರಿಯಾಗಿ ರಕ್ಷಿಸಿದ ಹಿನ್ನೆಲೆಯೆಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular