Friday, April 11, 2025
Google search engine

Homeರಾಜ್ಯ7 ವರ್ಷದಲ್ಲಿ 60 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ-ಮುಖ್ಯಮಂತ್ರಿ ಸಿದ್ದರಾಮಯ್ಯ

7 ವರ್ಷದಲ್ಲಿ 60 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ-ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 7 ವರ್ಷದಲ್ಲಿ 60 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಭವಿಷ್ಯದಲ್ಲಿ ರೈತರಿಗೆ ಹೆಚ್ಚಿನ ವಿದ್ಯುತ್ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ಇಂಧನ ಇಲಾಖೆ ಶನಿವಾರ ಆಯೋಜಿಸಿದ್ದ ‘ರೈತ ಸೌರಶಕ್ತಿ ಮೇಳ’ದ ಉದ್ಘಾಟನೆ, ‘ಕುಸುಮ್’ ಬಿ ಮತ್ತು ಸಿ ಯೋಜನೆ ಹಾಗೂ ಹೊಸ ವಿದ್ಯುತ್ ಉಪಕೇಂದ್ರಗಳನ್ನು ಲೋಕಾರ್ಪಣೆಗೊಳಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

ದೇಶದಲ್ಲೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ಎರಡನೇ ರಾಜ್ಯ ಕರ್ನಾಟಕ. ಹೀಗಾಗಿ ಒಣಭೂಮಿಯ ಕೃಷಿಗೆ ಆದ್ಯತೆ ನೀಡಿ ಸಂಶೋಧನೆಗಳು ನಡೆಯಬೇಕು. ಜನಸಂಖ್ಯೆ ಹೆಚ್ಚಾಗಿ ರೈತರ ಬೆಳೆಗಳ ಇಳುವರಿ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ಸಮಗ್ರ ಕೃಷಿಗೆ ಹೆಚ್ವಿನ ಬೆಂಬಲ ನೀಡುವ ಸಲುವಾಗಿ ಕೃಷಿಯ ಉಪಕಸುಬುಗಳ ಬೆಳವಣಿಗೆಗೆ ಸರ್ಕಾರ ಸಂಪೂರ್ಣ ಸಹಕಾರ, ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ 32 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮುಂದಿನ 7 ವರ್ಷಗಳಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹಮ್ಮಿಕೊಂಡಿದ್ದೇವೆ. ಸೋಲಾರ್ ವಿದ್ಯುತ್ ಪಂಪ್ ಸೆಟ್ ಮತ್ತು ಪ್ಯಾನಲ್​​ಗಳಿಗೆ ರಾಜ್ಯ ಸರ್ಕಾರದ ಸಬ್ಸಿಡಿ ಮೊತ್ತವನ್ನು ಶೇ.30 ರಿಂದ ಶೇ.50ಕ್ಕೆ ಹೆಚ್ಚಿಸಿದೆ. ನಮ್ಮ ಸರ್ಕಾರದ ಈ ಸೌಲಭ್ಯವನ್ನು ರೈತರು ಹೆಚ್ಚೆಚ್ಚು ಬಳಸಿಕೊಳ್ಳಬೇಕು. ಸೌರವಿದ್ಯುತ್ ಬಳಕೆಯನ್ನು ಹೆಚ್ಚೆಚ್ಚು ಮಾಡುವ ಮೂಲಕ ವಿದ್ಯುತ್ ಕೊರತೆ ನೀಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಬಗ್ಗೆ ರೈತರಿಗೆ ಹೆಚ್ಚೆಚ್ಚು ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.

ಇವತ್ತಿನವರೆಗೂ ನಾಡಿನ ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳು ಬಳಸುತ್ತಿರುವ 200 ಯೂನಿಟ್ ವರೆಗಿನ ಉಚಿತ ವಿದ್ಯುತ್​ಗಾಗಿ ರಾಜ್ಯ ಸರ್ಕಾರ ಉಚಿತ ವಿದ್ಯುತ್ತಿನ ಬಾಬ್ತು 5,320 ಕೋಟಿ ರೂಪಾಯಿಯನ್ನು ಇಂಧನ ಇಲಾಖೆಗೆ ನೀಡಿದೆ. ನಮ್ಮ ಜನರಿಗೆ ಜೀರೋ ಬಿಲ್ ಬರುತ್ತಿದೆ. ನಮ್ಮ ಸರ್ಕಾರ ಈ ಜನೋಪಯೋಗಿ ಗ್ಯಾರಂಟಿ ಯೋಜನೆಯನ್ನು ಯಶಸ್ವಿಯಾಗಿ ಮುಂದುವರೆಸಲಿದೆ. ಸೌರಶಕ್ತಿ ಕ್ಷೇತ್ರದ ಹೊಸ ಆವಿಷ್ಕಾರಗಳು, ತಂತ್ರಜ್ಞಾನಗಳು ರೈತರ ಮನೆ ಬಾಗಿಲಿಗೆ ತಲುಪಿ, ಕೃಷಿಯಲ್ಲಿ ಬಳಕೆ ಆದರೆ ಮಾತ್ರ ಸಾರ್ಥಕತೆ ಬರುತ್ತದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ನಡೆದು ಅವು ರೈತರನ್ನು ಮುಟ್ಟಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರೈತರು ಹೆಚ್ಚೆಚ್ಚು ಆಹಾರ ಬೆಳೆದು ವಿದೇಶಕ್ಕೂ ರಫ್ತು ಮಾಡುವಂತಾಗಬೇಕು. ಇದಕ್ಕೆ ನಮ್ಮ ಸರ್ಕಾರ ಸಕಲ ನೆರವು ನೀಡುತ್ತದೆ ಎಂದರು.

ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ‘ಪ್ರಧಾನಮಂತ್ರಿ ಕುಸುಮ್‌ ಯೋಜನೆಯಡಿ ಕೃಷಿ ನೀರಾವರಿಗೆ ಸೌರವಿದ್ಯುತ್‌ ಚಾಲಿತ ಪಂಪ್‌ ಅಳವಡಿಕೆಗೆ ವೆಂಡರ್‌ಗಳನ್ನು ಗುರುತಿಸಲಾಗಿದೆ. ಮೊಬೈಲ್‌ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು’ ಎಂದರು.

RELATED ARTICLES
- Advertisment -
Google search engine

Most Popular