ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದಕ್ಷ ಮತ್ತು ಪ್ರಾಮಾಣಿಕ ರಾಜಕಾರಣಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೇಶದ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸಿದ್ದರಾಮಯ್ಯನವರ ೭೭ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂತಹ ಜನಪರ ನಾಯಕನನ್ನು ಪಡೆದಿರುವ ನಾವು ಧನ್ಯರು ಎಂದರು.
ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಎಂದು ಭ್ರಷ್ಟಾಚಾರ ಮತ್ತು ಸ್ವ-ಜನ ಪಕ್ಷಪಾತದ ಸೋಂಕು ಹಚ್ಚಿಕೊಳ್ಳದ ಅವರು ಸಮಾಜದಲ್ಲಿ ನೊಂದವರು, ಹಿಂದುಳಿದವರು ಮತ್ತು ದೀನ ದಲಿತರ ಏಳಿಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದು ಅಂತಹ ನಾಯಕರನ್ನು ನಾವು ಸದಾ ಬೆಂಬಲಿಸಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಎಂಬ ತತ್ವದಡಿ ರಾಜಕಾರಣ ಮಾಡುತ್ತಿದ್ದು ಇದರಿಂದ ನಾಡಿಗೆ ಮತ್ತು ದೇಶಕ್ಕೆ ಒಳಿತಾಗುತ್ತಿರುವುದರಿಂದ ಅವರು ನೂರ್ಕಾಲ ಆರೋಗ್ಯವಂತಾಗಿ ಬದುಕಿ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಬೇಕೆಂದು ಹಾರೈಸಿದರು.
ವಿರೋಧ ಪಕ್ಷಗಳು ಅವರ ವಿರುದ್ದ ಅನಗತ್ಯವಾಗಿ ಸುಳ್ಳು ಆರೋಪ ಮಾಡುತ್ತಿದ್ದು ಅವುಗಳಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಪ್ರತಿಪಾದಿಸಿದ ಅವರು ಕನ್ನಡ ನಾಡಿನ ಜನತೆಯ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯನವರನ್ನು ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲವೆಂದು ನುಡಿದರು.
ಈ ಸಂಧರ್ಭದಲ್ಲಿ ನೆರೆದಿದ್ದ ನೂರಾರು ಮಂದಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯಕಾರದ ಘೋಷಣೆಗಳನ್ನು ಮೊಳಗಿಸಿ ಜನ್ಮ ದಿನದ ಶುಭಾಷಯ ಕೋರಿ ಅವರಿಗೆ ಒಳಿತಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಬೇಡಿಕೊಂಡು ಅವರ ಗುಣಗಾನ ಮಾಡಿದರು.
ಆನಂತರ ಪಕ್ಷದ ವತಿಯಿಂದ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿ ಸಾರ್ವಜನಿಕರಿಗೆ ಕೇಕ್ ಮತ್ತು ಸಿಹಿ ನೀಡಿ ಸಾರ್ವಜನಿಕ ಆಸ್ಪತ್ರೆಗೂ ತೆರಳಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ತಾ.ಪಂ. ಮಾಜಿ ಸದಸ್ಯ ಎ.ಟಿ.ಗೋವಿಂದೇಗೌಡ, ದಲಿತ ಮುಖಂಡ ಡಿ.ಕೆ.ಕೊಪ್ಪಲುರಾಜಯ್ಯ, ತಾಲೂಕು ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ತಿಪ್ಪೂರುಮಹದೇವನಾಯಕ ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ಲತಾರವಿ, ಸಾಲಿಗ್ರಾಮ ತಾಲೂಕು ಎಸ್ಸಿ ವಿಭಾಗದ ಅಧ್ಯಕ್ಷ ಕಂಠಿಕುಮಾರ್, ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಸೈಯದ್‌ಜಾಬೀರ್, ಸರಿತಾಜವರಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರದೀಪ್‌ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಮಾಜಿ ಸದಸ್ಯ ಸೈಯದ್‌ಅಸ್ಲಾಂ, ಅಡಗೂರು ಗ್ರಾ.ಪಂ. ಅಧ್ಯಕ್ಷ ಮಹದೇವ್, ಮಾಜಿ ಉಪಾಧ್ಯಕ್ಷ ಡಿ.ಸಿ.ರವಿ, ಮಾಯಿಗೌಡನಹಳ್ಳಿ ಗ್ರಾ.ಪಂ. ಸದಸ್ಯೆ ವಂದನ, ಮುಖಂಡರಾದ ಕೆ.ಪಿ.ಜಗದೀಶ್, ದಿಡ್ಡಹಳ್ಳಿಬಸವರಾಜು, ರಾಜನಾಯಕ, ನವೀದ್‌ಅಹಮದ್, ಹೊಸಕೋಟೆಚೆಲುವರಾಜು, ಬಿ.ಹೆಚ್.ಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಬಿ.ಜೆ.ನವೀನ್‌ಕುಮಾರ್ ಮತ್ತಿತರರು ಹಾಜರಿದ್ದರು.